ಚಿತ್ರರಂಗದಲ್ಲಿ ನನ್ನನ್ನು 30ವರ್ಷಗಳಿಂದ ಸಾಕಿದ್ದೀರಿ, ನನ್ನ ಜೀವನ ಪ್ರಜಾ ಸೇವೆಗೆ ಮೀಸಲು, ಜನ ಸೇವೆ ಮಾಡುವ ಹುಮ್ಮಸ್ಸು ಇನ್ನೂ ಕುಂದಿಲ್ಲ. ಮದರ್ ತೆರೇಸಾ ನನ್ನ ಆದರ್ಶ. ಅವರ ಜನ್ಮದಿನವೇ ನನ್ನ ಪಕ್ಷ ಆರಂಭವಾಗುತ್ತಿದೆ ಎಂದು ಮೆಗಾಸ್ಟಾರ್ ಚಿರಂಜೀವಿ ಹೇಳಿದರು.
ತಿರುಮಲ ಸಮೀಪದ ರಾಜೀವ್‌ನಗರದಲ್ಲಿ ಮಂಗಳವಾರ ಸಂಜೆ ನೂತನ ಪಕ್ಷ 'ಪ್ರಜಾರಾಜ್ಯಂ' ಅನ್ನು ಉದ್ಘಾಟಿಸಿ, ನೆರೆದ ಲಕ್ಷಾಂತರ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಜಾರಾಜ್ಯಂನ ಪ್ರಣಾಳಿಕೆ ರೈತರ ಸಮಸ್ಯೆಗಳಿಗೆ ಅಗ್ರಸ್ಥಾನವನ್ನು ನೀಡಲಿದೆ ಎಂದ ಅವರು, ಜನರ ಕಷ್ಟಕಾರ್ಪಣ್ಯದ ಅರಿವು ನನಗಿದೆ. ಅದನ್ನು ಪರಿಹರಿಸುವ ಅವಕಾಶ ಇದೀಗ ಒದಗಿ ಬಂದಿರುವ ನಿಟ್ಟಿನಲ್ಲಿ ನೂತನ ರಾಜಕೀಯ ಪಕ್ಷವನ್ನು ಹುಟ್ಟುಹಾಕಿರುವುದಾಗಿ ತಿಳಿಸಿದರು.
ಇದು ಪ್ರಜೆಗಳ ಪಕ್ಷ,ಬಡ-ಬಗ್ಗರ ಪಕ್ಷ,ಕಾರ್ಮಿಕರ ಪಕ್ಷ, ಮಹಿಳೆಯರ, ಪ್ರಗತಿಪರ, ಅಭಿವೃದ್ಧಿ ಪರ ಪಕ್ಷವಾಗಿರುವುದಾಗಿ ತಿಳಿಸಿದ ಚಿರಂಜೀವಿ, ನಾನು ಯಾವಾಗಲೂ ನ್ಯಾಯಪರ ವ್ಯಕ್ತಿ. ನಾನೊಬ್ಬ ಸಾಮಾನ್ಯ ವ್ಯಕ್ತಿಯ ಪುತ್ರನಾಗಿದ್ದೇನೆ ಎಂದರು.
ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಸುಧಾರಿಸಬೇಕಿದೆ, ಹಳ್ಳಿಗಳಲ್ಲಿರುವ ಆಸ್ಪತ್ರೆಗಳಲ್ಲಿ ಮತ್ತಷ್ಟು ಉತ್ತಮ ಸೌಲಭ್ಯವನ್ನು ನೀಡುವ ಮೂಲಕ, ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಒತ್ತು ನೀಡುವುದೇ ಪಕ್ಷದ ಉದ್ದೇಶವಾಗಿದೆ ಎಂದು ಹೇಳಿದರು.
ಮದರ್ ತೆರೇಸಾ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ನನ್ನ ಜೀವನದ ಆದರ್ಶವಾಗಿದ್ದಾರೆ. ಏನಾದರು ಮಾಡಬೇಕಿದ್ದರೆ ಅದಕ್ಕೊಂದು ರಾಜಕೀಯ ವೇದಿಕೆ ಬೇಕು, ಅದು ರಾಜಕೀಯ ವೇದಿಕೆ ಎಂದ ಅವರು, ಆ ನಿಟ್ಟಿನಲ್ಲಿ ರಾಜಕೀಯ ಪಕ್ಷದ ಮೂಲಕ ಜನಸೇವೆ ಮಾಡಲು ಹೊರಟಿರುವುದಾಗಿ ತಿಳಿಸಿದರು.
ಪಕ್ಷದ ಧ್ವಜ ಅನಾವರಣ: ಪಕ್ಷದ ಹೆಸರು ಪ್ರಜಾರಾಜ್ಯಂ ಅನ್ನು ಅಧಿಕೃತವಾಗಿ ಘೋಷಿಸಿದ ಬಳಿಕ, ಪಕ್ಷದ ಧ್ವಜ ಹಸಿರು ಸಿರಿಯ ಮಧ್ಯೆ ಸೂರ್ಯೋದಯವನ್ನು ನಟ ಚಿರಂಜೀವಿ ಅನಾವರಣಗೊಳಿಸಿದರು.
ಪ್ರಕೃತಿಯೇ ಪಕ್ಷದ ಚಿಹ್ನೆಗೆ ಸ್ಫೂರ್ತಿ ಎಂದು ತಿಳಿಸಿದ ಅವರು, ಹಸಿರು-ಬಿಳಿ ಬಣ್ಣದ ನಡುವೆ ಕಂಗೊಳಿಸುವ ಸೂರ್ಯನ ಬಾವುಟವನ್ನು ಅನಾವರಣಗೊಳಿಸಿ, ಬಿಳಿ ಬಣ್ಣ ಪಾರ ದರ್ಶಕತೆಯ ಸಂಕೇತ, ಹಸಿರು ಸಸ್ಯಶ್ಯಾಮಲೆಯ ಸಂಕೇತ. ಇದು ಹಿಂದು-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದೆ ಎಂದು ಧ್ವಜವನ್ನು ಅನಾವರಣಗೊಳಿಸಿ ಚಿರಂಜೀವಿ ಅಭಿ ಪ್ರಾಯ ವ್ಯಕ್ತಪಡಿಸಿದರು.
ಅಪಾರ ಜನಸ್ತೋಮ: ನೂತನ ಪಕ್ಷದ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ಚಿರಂಜೀವಿ ಅವರ ಸುಮಾರು 5ಲಕ್ಷಕ್ಕೂ ಅಧಿಕ ಅಭಿಮಾನಿಗಳು ನೆರೆದಿದ್ದು, ಮಹಿಳೆಯರು, ಪುರುಷರು, ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಆದರೆ ನೆರೆದ ಜನಸ್ತೋಮವನ್ನು ನಿಯಂತ್ರಿಸಲು ಪೊಲೀಸ್ ಪಡೆ ಹರಸಾಹಸ ಪಡುತ್ತಿದ್ದರು, ಎಲ್ಲೆಡೆಯಿಂದ ಜನರು ನುಗ್ಗಿ ಬರುತ್ತಿದ್ದು, ಹಲವೆಡೆ ನೂಕುನುಗ್ಗಲಿನಿಂದಾಗಿ ಅವ್ಯವಸ್ಥೆ ತಲೆದೋರಿತ್ತು.
|