ನವದಹೆಲಿ: ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರ ನೂತನ ರಾಜಕೀಯ ಪಕ್ಷ ಪ್ರಜಾರಾಜ್ಯಂನ ಉದಯದಿಂದಾಗಿ ಕಾಂಗ್ರೆಸ್ ಬೆಂಬಲ ಮೂಲಕ್ಕೆ ಯಾವುದೇ ಹಾನಿಯಾಗದು, ಆದರೆ ತಮ್ಮ ವಿರೋಧಿ ಪಕ್ಷವಾಗಿರುವ ತೆಲುಗು ದೇಶಂಗೆ ಇದರಿಂದ ಹಾನಿಯಾಗಬಹುದು ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ತೆಲುಗಿನ ನಂ ವನ್ ಸಿನಿಮಾ ತಾರೆಯಾಗಿರುವುದಕ್ಕೆ ಚಿರಂಜೀವಿಯನ್ನು ಅಭಿನಂದಿಸಿದ ಮೊಯ್ಲಿ, ರಾಜ್ಯದಲ್ಲಿ ಅವರ ರಾಜಕೀಯ ಸಂಸ್ಥೆಯು ಯಾವ ರೂಪವನ್ನು ಪಡೆಯಲಿದೆ ಎಂದು ಹೇಳಲು ಕಾಲ ಪಕ್ವವಾಗಿಲ್ಲ ಎಂದು ನುಡಿದರು. ವೀರಪ್ಪ ಮೊಯ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಧ್ರುವೀಕರಣಗೊಂಡಿರುವ ರಾಜಕೀಯ ವಾತಾವರಣದಲ್ಲಿ ತಮ್ಮ ಪಕ್ಷವು ಸುದೃಢವಾಗಿ ಹೊರಹೊಮ್ಮುತ್ತಿದೆ ಎಂದು ಅವರು ನುಡಿದರು.
ಚಿರಂಜೀವಿ ಪಕ್ಷವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಲ್ಲಿ ರಾಜಕೀಯ ನಕಾಶೆಯಲ್ಲಿ ಬದಲಾವಣೆ ಉಂಟಾಗಬಹುದೇ ಎಂಬುದಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ ಮೊಯ್ಲಿ, ಪರಿಸ್ಥಿತಿ ಉದ್ಭವಿಸಿದಾಗ ಪಕ್ಷವು ವಿಶ್ಲೇಷಣೆ ಮಾಡಲಿದೆ ಎಂದು ನುಡಿದರು.
ಚಿರಂಜೀವಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಲ್.ಕೆ ಆಡ್ವಾಣಿಯವರನ್ನು ಭೇಟಿ ಮಾಡಿರುವ ಕುರಿತು ಸುದ್ದಿಗಾರರು ಮೊಯ್ಲಿಯವರ ಗಮನ ಸೆಳೆದಾಗ, ಚಿರಂಜೀವಿ ಎಲ್ಲರನ್ನೂ ಭೇಟಿಮಾಡುತ್ತಾರೆ, ಅದಕ್ಕೆ ಹೆಚ್ಚಿನ ಬಣ್ಣ ಬಳಿಯಬೇಕಿಲ್ಲ ಎಂದು ನುಡಿದರು.
|