'ಪ್ರತ್ಯೇಕವಾದಿ ಶಕ್ತಿಗಳ' ಪರವಾಗಿ ಮಾತನಾಡುವ 'ಖ್ಯಾತ ಪತ್ರಕರ್ತರು ಮತ್ತು ಬರಹಗಾರ'ರಿಗೆ ಎಚ್ಚರಿಕೆ ನೀಡಿರುವ ಬಿಜೆಪಿಯು, ಬರಹ ಮತ್ತು ವಾಕ್ ಸ್ವಾತಂತ್ರ್ಯವು ರಾಷ್ಟ್ರದ ಸಾರ್ವಭೌಮತ್ವಕ್ಕೆ ಧಕ್ಕೆಯುಂಟುಮಾಡಬಾರದು ಎಂದು ಹೇಳಿದೆ.
"ಸ್ವತಂತ್ರ ಕಾಶ್ಮೀರದ ಪರಿಕಲ್ಪನೆಯನ್ನು ಸಮರ್ಥಿಸಿಕೊಳ್ಳುವ ನಿಟ್ಟಿನಲ್ಲಿ ಖ್ಯಾತ ಪತ್ರಕರ್ತರು ಮತ್ತು ಬರಹಗಾರರು ಎಂದು ಕರೆಸಿಕೊಳ್ಳುವವರು ತಮ್ಮ ಮಿತಿಯನ್ನು ಮೀರಬಾರದು ಎಂದು ಎಚ್ಚರಿಸಲು ಪಕ್ಷವು ಬಯಸುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ರಾಷ್ಟ್ರದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಧಕ್ಕೆಯುಂಟುಮಾಡಬಾರದು" ಎಂದು ವರದಿಗಾರರೊಂದಿಗೆ ಮಾತನಾಡುತ್ತಿದ್ದ ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಪ್ರಜಾಪ್ರಭುತ್ವ ರಾಷ್ಟ್ರದ ಪ್ರಮುಖ ಅಂಶವಾಗಿರುವ ರಾಷ್ಟ್ರದ ಅನನ್ಯತೆಗೆ ಸವಾಲೆಸೆಯಲು ನಾಗರಿಕರ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಬಾರದು ಎಂದು ಅವರು ಖಾರವಾಗಿ ನುಡಿದರು.
ಕಾಶ್ಮೀರದ ಕುರಿತು ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಅವರು ನೀಡಿರುವ ವಿವಾದಾಸ್ಪದ ಹೇಳಿಕೆಗೆ ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಕಾಂಗ್ರೆಸ್ ಅವರನ್ನು 'ಸಡಿಲ ಫಿರಂಗಿ' ಎಂದು ಜರೆದಿದ್ದರೆ, ಬಿಜೆಪಿಯು ಅರುಂಧತಿ ರಾಯ್ ಹೇಳಿಕೆ ರಾಜದ್ರೋಹ ಎಂದು ಬಣ್ಣಿಸಿತ್ತು.
ಶ್ರೀನಗರದಲ್ಲಿ ಇತ್ತೀಚೆಗೆ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅರುಂಧತಿ, ಕಾಶ್ಮೀರದ ಜನತೆಯು ಸಂಪೂರ್ಣ ಸ್ವಾತಂತ್ರ್ಯವನ್ನು ಬಯಸುತ್ತಾರೆ ಮತ್ತು ಅವರ ಬೇಡಿಕೆಯನ್ನು ಸರಕಾರ ಪರಿಗಣಿಸಬೇಕು ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದಾರೆ.
|