ಜಮ್ಮುವಿನ ಚಿನ್ನೂರ್ ಪ್ರದೇಶದ ಮನೆಯೊಂದರಲ್ಲಿ ಅವಿತಿರುವ ಉಗ್ರರು ಪೊಲೀಸರೊಂದಿಗೆ ನಡೆಸಿರುವ ಗುಂಡಿನ ಚಕಮಕಿಯ ವೇಳೆ ಉಗ್ರನೊಬ್ಬ ಹತನಾಗಿದ್ದಾನೆ. ಇನ್ನಿಬ್ಬರು ಮನೆಯೊಂದರಲ್ಲಿ ಅವಿತುಕೊಂಡಿದ್ದಾರೆ. ಉಗ್ರರು ಅಡಗಿರುವ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡಿರುವ ಸೇನೆ, ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಕುಟುಂಬದ ಮಹಿಳೆಯೊಬ್ಬರನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಿಶ್ರಿವಾಲ ಪ್ರದೇಶದಲ್ಲಿ ಮೂವರು ಉಗ್ರರು ಯದ್ವಾತದ್ವಾ ಗುಂಡುಹಾರಿಸಿದ ಪರಿಣಾಮ ಓರ್ವ ಸೇನಾಧಿಕಾರಿ ಹಾಗೂ ಇತರ ನಾಲ್ವರು ನಾಗರಿಕರು ಹತರಾಗಿದ್ದು, ಜಮ್ಮುವಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಆಟೋ ರಿಕ್ಷಾಒಂದರ ಚಾಲಕನನ್ನು ಕೊಲೆಗೈದು ಉಗ್ರರು ಆ ರಿಕ್ಷಾದಲ್ಲಿ ತೆರಳಿದ್ದು, ಚಿನ್ನೂರಿನ ಮನೆಯೊಂದರಲ್ಲಿ ಅವಿತುಕೊಂಡಿದ್ದು, ಮನೆಯವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರಲ್ಲದೆ, ಪೊಲೀಸರೊಂದಿಗೆ ಗುಂಡಿನ ಚಕಮಕಿಗೆ ಇಳಿದಿದ್ದಾರೆ. ಪೊಲೀಸ್ ಸಮವಸ್ತ್ರ ಧರಿಸಿರುವ ಉಗ್ರರು ಎ.ಕೆ.47 ರೈಫಲ್‌ನಲ್ಲಿ ನಾಗರಿಕರತ್ತ ಗುಂಡು ಹಾರಿಸಿದ್ದರು.
ಈ ಉಗ್ರರು ಕನಚಾಕ್ ಗಡಿನಿಯಂತ್ರಣ ರೇಖೆಯಲ್ಲಿ ಮಂಗಳವಾರ ಅಕ್ರಮವಾಗಿ ನುಸುಳಿದವರೆಂದು ಮೂಲಗಳು ಹೇಳಿವೆ.
ಗುಂಡು ಹಾರಟ ನಡೆಸಿ ಭದ್ರತಾ ಸಿಬ್ಬಂದಿಗಳ ಗಮನ ಬೇರೆಡೆ ಸೆಳೆದ ಉಗ್ರರು ಪಾಕಿಸ್ತಾನ ಪ್ರಾಂತ್ಯದಿಂದ ಗಡಿನಿಯಂತ್ರಣ ರೇಖೆ ಮೂಲಕ ಮಂಗಳವಾರ ನಸುಕಿನಲ್ಲಿ ಭಾರತ ಪ್ರದೇಶಕ್ಕೆ ನುಸುಳಿದ್ದರು.
|