ಒರಿಸ್ಸಾದ ಕಂಧಮಾಲ್ ಜಿಲ್ಲೆಯ ಎಂಟು ಸ್ಥಳಗಳಲ್ಲಿ ಕಂಡಲ್ಲಿ ಗುಂಡಿಕ್ಕುವ ಆಜ್ಞೆಯನ್ನು ರಾಜ್ಯ ಸರಕಾರ ಹೊರಡಿಸಿದೆ. ಬುಧವಾರ ಸಂಜೆ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಗೃಹ ಇಲಾಖೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.
ವಿಶ್ವಹಿಂದೂ ಪರಿಷತ್ ನಾಯಕ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಹತ್ಯೆಯ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರಿಂದ ಭಾರಿ ಪ್ರಮಾಣದ ಹಿಂಸಾಚಾರ ಮುಂದುವರಿದಿದ್ದರಿಂದ ಕರ್ಫ್ಯೂ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೋಮಗಲಭೆಯಲ್ಲಿ ಮೃತರಾದವರ ಸಂಖ್ಯೆ ಒಂಭತ್ತಕ್ಕೇರಿದ್ದು ವಿಎಚ್‌ಪಿ ನಾಯಕ ಹಾಗೂ ಅವರ ನಾಲ್ಕು ಅನುಯಾಯಿಗಳ ಹತ್ಯೆಯ ಸೇಡನ್ನು ತೀರಿಸಿಕೊಳ್ಳಲು ಪ್ರತಿಭಟನಾಕಾರರು ಚರ್ಚ್ ಮತ್ತು ಪ್ರಾರ್ಥನಾ ಮಂದಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದರಿಂದ ಸಾವಿರಾರು ನಾಗರಿಕರು ಸುರಕ್ಷತೆಗಾಗಿ ಅರಣ್ಯ ಪ್ರದೇಶಕ್ಕೆ ತೆರಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಂಧಮಾಲ್ ಜಿಲ್ಲೆಯ ಬಾರಾಖಾಮಾ ಗ್ರಾಮದಲ್ಲಿ ಮಂಗಳವಾರದಂದು ನಡೆದ ಘರ್ಷಣೆಯಲ್ಲಿ ನಾಲ್ಕು ಮಂದಿ ಹತ್ಯೆಯಾಗಿದ್ದು, ಟಿಕಾಬಾಲಿ, ಸಾರಂಗದಾ, ರೈಕಿಯಾ ಮತ್ತು ಇನ್ನಿತರ ಸ್ಥಳಗಳಲ್ಲಿ ಹಿಂಸಾಚಾರ ಮುಂದುವರಿದಿದ್ದರಿಂದ ಜಿಲ್ಲಾಡಳಿತ ಕರ್ಫ್ಯೂ ಹೇರಿದ್ದು ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಹೆಚ್ಚಿನ ಸೈನಿಕರು ಹಾಗೂ ಸೇನಾ ಹೆಲಿಕಾಪ್ಟರ್‌ಗಳಿಗಾಗಿ ಕೇಂದ್ರದ ನೆರವನ್ನು ಕೋರಿದೆ.
ಕಂಧಮಾಲ್ ಜಿಲ್ಲೆಯ ಬಾರಿಮುಂಡಾ ಗ್ರಾಮದಲ್ಲಿ 60 ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಪ್ರಾರ್ಥನಾ ಮಂದಿರಗಳನ್ನು ನಾಶಮಾಡಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಗಳು ಘಟನಾ ಸ್ಥಳಕ್ಕೆ ತೆರಳಲು ರಸ್ತೆ ತಡೆ ನಡೆಸುತ್ತಿರುವ ಪ್ರತಿಭಟನಾಕಾರರು ಅಡ್ಡಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
|