ನೇಪಾಳದ ಪ್ರಧಾನಿಯಾಗಿ ಪ್ರಚಂಡ ಅಧಿಕಾರ ಸ್ವೀಕರಿಸಿದ ನಂತರ ಭಾರತಕ್ಕೆ ಭೇಟಿ ನೀಡುವ ಬದಲು ಚೀನಾಗೆ ಭೇಟಿ ನೀಡಿದ ಕ್ರಮ ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆಗಳು ಎದುರಾದ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಭಾರತಕ್ಕೆ ಮೊದಲ ರಾಜಕೀಯ ಭೇಟಿ ನೀಡುವುದಾಗಿ ಹೇಳಿದ್ದಾರೆ.
ಒಲಿಂಪಿಕ್ಸ್‌ನ ಮುಕ್ತಾಯ ಸಮಾರಂಭದಲ್ಲಿ ಉಪಸ್ಥಿತರಿರಲು ಐದು ದಿನಗಳ ಕಾಲ ಚೀನಾಗೆ ಭೇಟಿ ನೀಡಿದ ಪ್ರಚಂಡ ಅವರ ಪ್ರವಾಸ ರಾಜಕೀಯ ವಲಯದಲ್ಲಿ ಭಾರಿ ಟೀಕೆಗೆ ಒಳಗಾಗಿತ್ತು. ನೇಪಾಳದಲ್ಲಿ ಈ ಹಿಂದೆ ಅಧಿಕಾರ ಸ್ವೀಕರಿಸಿದ ಹೆಚ್ಚಿನ ಪ್ರಧಾನಿಗಳು ಮೊದಲು ಭಾರತಕ್ಕೆ ಭೇಟಿ ನೀಡುತ್ತಿರುವುದನ್ನು ಸ್ಮರಿಸಬಹುದು.
ಶೀಘ್ರದಲ್ಲಿ ಭಾರತಕ್ಕೆ ಮೊದಲ ರಾಜಕೀಯ ಭೇಟಿಯನ್ನು ನೀಡುತ್ತೇನೆ ಎಂದು ನೇಪಾಳದ ಪ್ರಧಾನಿ ಪ್ರಚಂಡ ಚೀನಾದಿಂದ ಆಗಮಿಸಿದ ನಂತರ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ತಿಳಿಸಿದರು.
ಭಾರತ ಮತ್ತು ನೇಪಾಳ ಸಾಂಪ್ರದಾಯಿಕವಾಗಿ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಹೋಲಿಕೆ ಒಂದೇ ತೆರನಾಗಿದೆ. ದೆಹಲಿಯಲ್ಲಿ ನಡೆದ ನೇಪಾಳದ ರಾಜಕೀಯ ಪಕ್ಷಗಳ 12 ಅಂಶಗಳ ಒಪ್ಪಂದದ ಸಂದರ್ಭದಿಂದ ಭಾರತ ಮತ್ತು ಸಿಪಿಎನ್-ಮಾವೋವಾದಿಗಳ ಸಂಬಂಧ ಉತ್ತಮವಾಗಿದೆ ಎಂದು ಮಾಜಿ ಗೆರಿಲ್ಲಾ ನಾಯಕ, ನೇಪಾಳದ ಪ್ರಧಾನಿ ಪ್ರಚಂಡ ಹೇಳಿದ್ದಾರೆ.
ಬೀಜಿಂಗ್ ಭೇಟಿಯ ಸಂದರ್ಭದಲ್ಲಿ ಚೀನಾದ ಅಧ್ಯಕ್ಷ ಹು ಜಿಂಟಾವೊ ಮತ್ತು ಇತರ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿ ಮಾಡಿದ್ದು, ಬೀಜಿಂಗ್ ಭೇಟಿ ಫಲಪ್ರದ ಎಂದು ಪ್ರಧಾನಿ ಪ್ರಚಂಡ ಬಣ್ಣಿಸಿದ್ದಾರೆ.
|