ಜಮ್ಮುವಿನ ಮನೆಯೊಂದರಲ್ಲಿ ಅವಿತುಕೊಂಡಿದ್ದ ಮೂರೂ ಉಗ್ರರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಲ್ಲುವ ಮೂಲಕ, 19 ಗಂಟೆಗಳ ಒತ್ತೆಸೆರೆ ನಾಟಕ ಮತ್ತು ಗುಂಡಿನ ಕಾದಾಟಕ್ಕೆ ತೆರೆ ಬಿದ್ದಿದೆ.
ಬುಧವಾರ ಮುಂಜಾನೆ, ಗಡಿನಿಯಂತ್ರಣ ರೇಖೆಯ ಮೂಲಕ ಅಕ್ರಮವಾಗಿ ನುಸುಳಿದವರೆಂದು ಶಂಕಿಸಲಾಗಿರುವ ಉಗ್ರರು ಒರ್ವ ಸೇನಾಧಿಕಾರಿ ಸೇರಿದಂತೆ, ಐದು ಮಂದಿಯನ್ನು ಕೊಲೆ ಮಾಡಿದ್ದರು. ರಿಕ್ಷಾ ಚಾಲಕನನ್ನೊಬ್ಬನ್ನು ಕೊಲೆ ಮಾಡಿ ಆತನ ರಿಕ್ಷಾದಲ್ಲಿ ಸುತ್ತಾಡಿದ್ದ ಇವರು ಕೊನೆಗೆ, ಅಂತಾರಾಷ್ಟ್ರೀಯ ಗಡಿಯಿಂದ 20 ಕಿ.ಮೀ ದೂರದಲ್ಲಿರುವ ಚಿನ್ನೂರಿನ ಮನೆಯೊಂದಕ್ಕೆ ನುಗ್ಗಿ ಅಲ್ಲಿನ ನಿವಾಸಿಗಳನ್ನು ಒತ್ತೆ ಸೆರೆಯಾಗಿಸಿಕೊಂಡು ಭದ್ರತಾ ಪಡೆಗಳತ್ತ ಗುಂಡು ಹಾರಿಸಲಾರಂಭಿಸಿದ್ದರು.
ಭದ್ರತಾ ಪಡೆಗಳು ದಿನವಿಡೀ ಕಾರ್ಯಾಚರಣೆ ನಡೆಸಿದ್ದು, ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಮೂರೂ ಉಗ್ರರು ಹತರಾಗಿದ್ದು, ಇವರೊಂದಿಗೆ ಮೂವರು ಒತ್ತೆ ಸೆರೆಯಾಳುಗಳೂ ಹತರಾಗಿದ್ದಾರೆ. ನಾಲ್ಕು ಮಕ್ಕಳು ಮತ್ತು ಮಹಿಳೆಯೊಬ್ಬಳನ್ನು ಕಾಪಾಡಲಾಗಿದೆ.
ಕತ್ತಲೆಯಲ್ಲಿ ನುಸುಳಿ ಪರಾರಿಯಾಗಲೆತ್ನಿಸಿದ ವೇಳೆ ಎರಡನೆ ಉಗ್ರನನ್ನು ಹತ್ಯೆ ಮಾಡಲಾಗಿದೆ.
ಗಡಿನಿಯಂತ್ರಣ ರೇಖೆಯಲ್ಲಿ ಮಂಗಳವಾರ ಮುಂಜಾನೆ ಅಕ್ರಮವಾಗಿ ನುಸುಳಿದ ಉಗ್ರರು ಇವರೇ ಆಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಉಗ್ರರು ಬುಧವಾರ ಮುಂಜಾನೆ ಮೊದಲಿಗೆ, ದೊಮನಾ ಮಿಶ್ರಿವಾಲ ಪ್ರದೇಶದಲ್ಲಿ ಸೇನಾ ಚೆಕ್-ಪೋಸ್ಟ್ ಮೇಲೆ ದಾಳಿ ನಡೆಸಿದ್ದರು.
|