ಭಾರತ-ಅಮೆರಿಕ ಅಣುಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತವು ಯಾವುದೇ ಒತ್ತಡಕ್ಕೆ ಸಿಲುಕದು ಮತ್ತು ಒಪ್ಪಂದದ ಹೊರಗಿನ ಯಾವುದೇ ಷರತ್ತುಗಳನ್ನು ಅದು ಒಪ್ಪದು ಎಂದು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಬುಧವಾರ ಹೇಳಿದ್ದಾರೆ.
ಭಾರತ ಮತ್ತು ಅಮೆರಿಕ 2005ರ ಜುಲೈ 18ರಂದು ಸಹಿ ಮಾಡಿರುವ ಆಧಾರದಲ್ಲಿಯೇ ಪರಸ್ಪರ ಸಹಕಾರ ಮುಂದುವರಿಯಲಿದೆ ಮತ್ತು ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರವು ಯಾವುದೇ ಒತ್ತಡಕ್ಕೆ ಸಿಲುಕದು ಎಂದು ಕಾಕೋಡ್ಕರ್ ಹೇಳಿದ್ದಾರೆ. ಅವರು ರಾಜಾ ರಾಮಣ್ಣ ತಾಂತ್ರಿಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮವೊಂದರ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದ ಭಾಗವಲ್ಲದ ಯಾವುದೇ ಷರತ್ತುಗಳನ್ನು ಭಾರತವು ಒಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕೆಲವು ಎನ್‌ಎಸ್‌ಜಿ ರಾಷ್ಟ್ರಗಳು ಭಾರತದೊಂದಿಗೆ ಅಣು ವ್ಯಾಪಾರಕ್ಕೆ ಕುರಿತಂತೆ ಎತ್ತಿರುವ ಅಪಸ್ವರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಾಕೋಡ್ಕರ್, ಇದುವರೆಗೆ ಎನ್‌ಎಸ್‌ಜಿ ರಾಷ್ಟ್ರಗಳು ಯಾವುದೇ ಜಂಟಿ ಹೇಳಿಕೆ ನೀಡಿಲ್ಲ, ಆದರೆ ಕೆಲವು ಸದಸ್ಯ ರಾಷ್ಟ್ರಗಳು, ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದ ಮತ್ತು ಸಮಗ್ರ ಅಣುಪರೀಕ್ಷೆ ನಿಷೇಧ ಒಪ್ಪಂದವನ್ನು ಪ್ರಸ್ತಾಪಿಸಿವೆ ಎಂದು ನುಡಿದರು.
ಅದೇನೇ ಇದ್ದರೂ, ಈ ನಿರ್ದಿಷ್ಟ ವಿಚಾರಕ್ಕೆ ಸಂಬಂಧಿಸಿದಂತೆ, ಭಾರತದ ನಿಲುವು ಸ್ಪಷ್ಟ ಮತ್ತು ಯಾವುದೇ ಬದಲಾವಣೆಗೆ ಅವಕಾಶ ಇಲ್ಲ ಎಂದು ಅನಿಲ್ ಕಾಕೊಡ್ಕರ್ ಹೇಳಿದರು.
ಪರಮಾಣು ಇಂಧನ ಆಯೋಗವು ಅಣು ಸ್ಥಾವರಗಳ ಪರಿಣಾಮಗಳ ಕುರಿತು ಸೂಕ್ಷ್ಮವಾಗಿ ಅಧ್ಯಯನ ಮಾಡಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನುಡಿದರು.
|