ಬಿಹಾರದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಇಲ್ಲಿಗೆ ಸಾವಿರ ಕೋಟಿ ರೂಪಾಯಿಯ ತುರ್ತು ಪರಿಹಾರ ಘೋಷಿಸಿದ್ದಾರೆ. ಇದಲ್ಲದೆ, 1.25 ಲಕ್ಷ ಟನ್ ಆಹಾರ ಧಾನ್ಯದ ನೆರವನ್ನೂ ಪ್ರಧಾನಿಯವರು ಘೋಷಿಸಿದ್ದಾರೆ.
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರೊಂದಿಗೆ ಬಿಹಾರದ ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದ ಅವರು, ಪರಿಸ್ಥಿತಿಯ ನಿಭಾವಣೆಗಾಗಿ ಸಾಧ್ಯ ಇರುವ ಎಲ್ಲಾ ನೆರವು ನೀಡುವುದಾಗಿಯೂ ಭರವಸೆ ನೀಡಿದರು.
ನವದೆಹಲಿಯಿಂದ ವಿಶೇಷ ಐಎಎಫ್ ವಿಮಾನದಲ್ಲಿ ಪುರ್ನಿಯಾಗೆ ಬಂದಿಳಿದ ಅವರು, ಅಲ್ಲಿಂದ ಐಎಎಫ್ ಹೆಲಿಕಾಫ್ಟರ್ ಏರಿ ಸುಪವುಲ್, ಸಹರ್ಶ, ಅರರಿಯ ಮತ್ತು ಮಾಧೆಪುರ ಜಿಲ್ಲೆಗಳ ಸಮೀಕ್ಷೆ ನಡೆಸಿದರು ಎಂದು ಮೂಲಗಳು ಹೇಳಿವೆ.
ಇವರೊಂದಿಗೆ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್, ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್, ಕೇಂದ್ರ ಜಲಸಂಪನ್ಮೂಲ ಖಾತೆಯ ಜೈಪ್ರಕಾಶ್ ನಾರಾಯಣ್ ಯಾದವ್ ಮತ್ತು ಪುರ್ನಿಯಾ ಮತ್ತು ಅರಾರಿಯಾದ ಬಿಜೆಪಿ ಸಂಸದರಾದ ಉದಯ್ ಸಿಂಗ್ ಮತ್ತು ಸುದೇವೊ ಪಾಸ್ವಾನ್ ಅವರುಗಳು ಉಪಸ್ಥಿತರಿದ್ದರು.
ನೇಪಾಳದಲ್ಲಿ ಪ್ರವಾಹ ತಡೆಗಾಗಿ ನಿರ್ಮಿಸಿದ್ದ ಮೊರಿಯು ಒಡೆದ ಕಾರಣ ಕೋಸಿ ನದಿ ಉಕ್ಕಿ ಹರಿಯುತ್ತಿದ್ದು, ಬಿಹಾರದ 15 ಜಿಲ್ಲೆಗಳು ಸಂಕಷ್ಟಕ್ಕೀಡಾಗಿವೆ.
ಭೀಕರ ಪ್ರಕೃತಿ ವಿಕೋಪದಿಂದಾಗಿ ಇದುವರೆಗೆ 55 ಮಂದಿ ಸಾವನ್ನಪ್ಪಿದ್ದು, 15 ಜಿಲ್ಲೆಗಳ 25 ಲಕ್ಷಕ್ಕೂ ಅಧಿಕ ಮಂದಿ ಮನೆಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸೇನೆ ಹಾಗೂ ನೆರವು ಕಾರ್ಯಕರ್ತರು ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. 396 ದೋಣಿಗಳು ಪರಿಹಾರ ಕಾರ್ಯದಲ್ಲಿ ನಿರತವಾಗಿವೆ.
ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಬುಧವಾರ ಭೇಟಿಯಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರು ಅವರು ಕೇಂದ್ರದಿಂದ ಸಾವಿರ ಕೋಟಿ ರೂಪಾಯಿ ನೆರವು ಯಾಚಿಸಿದ್ದರು. ಅಲ್ಲದೆ ವಿಪತ್ತು ತಪ್ಪಿಸಲು ಸೂಕ್ತ ಅಣೆಕಟ್ಟು ನಿರ್ಮಿಸುವಂತೆ, ನೇಪಾಳಕ್ಕೆ ರಾಜತಾಂತ್ರಿಕ ಉಪಕ್ರಮಗಳಿಗಾಗಿಯೂ ಅವರು ಒತ್ತಾಯಿಸಿದ್ದಾರೆ.
ಭಾರೀ ಪ್ರವಾಹದಿಂದಾಗಿ 242 ಪಂಚಾಯತ್‌ಗಳು ಮತ್ತು 671 ಹಳ್ಳಿಗಳು ನೀರಿನಲ್ಲಿ ಮುಳುಗಿವೆ. ತಕ್ಷಣದ ಪರಿಹಾರಕ್ಕಾಗಿ ರಾಜ್ಯವು ಒಂದು ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಬೇಡಿಕೆ ಇರಿಸಿದೆ.
ಭಾರೀ ಸ್ಥಳಾಂತರ ಕಾರ್ಯ ಬಿಹಾರದ ಪೂರ್ವ ಭಾಗದಲ್ಲಿ ಹೆಚ್ಚುತ್ತಿರುವ ಪ್ರವಾಹದಿಂದಾಗಿ ಆರು ಜಿಲ್ಲೆಗಳು ಸಂಪೂರ್ಣವಾಗಿ ಜಲಾವೃತವಾದ ಹಿನ್ನೆಲೆಯಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸುವ ಬೃಹತ್ ಕಾರ್ಯಾಚರಣೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಒಂದು ಲಕ್ಷ ಜನರು ಸರಕಾರಿ ಮತ್ತು ಸ್ವಂತ ದೋಣಿಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಜನರು ನಷ್ಟದ ಚಿಂತೆಯನ್ನು ಬಿಟ್ಟು ತಮ್ಮ ದನಕರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುಖ್ಯಮಂತ್ರಿ ನಿತಿಶ್ ಕುಮಾರ್ ಮನವಿ ಮಾಡಿದ್ದಾರೆ.
ಮುಂಬರುವ 48 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದ್ದು, ನೇಪಾಳದಿಂದ ಬಿಹಾರಕ್ಕೆ ಇಳಿಮುಖವಾದ ನದಿಯಿಂದ ಹೆಚ್ಚಿನ ನೀರು ಹರಿದುಬರುವ ಸಾಧ್ಯತೆಗಳಿವೆ ಎಂದು ಪ್ರಕಟಿಸಿದೆ.
ಶುಕ್ರವಾರದವರೆಗೆ ಸುಮಾರು 20 ಲಕ್ಷ ಜನತೆಯನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲು ಸರಕಾರ 900 ದೋಣಿಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಸಿ ನದಿ ಪ್ರವಾಹ ಉಲ್ಬಣಿಸುತ್ತಿರುವುದರಿಂದ ಪ್ರತಿ ದೋಣಿಗೆ 100 ಜನರಂತೆ ಪ್ರತಿನಿತ್ಯ 90,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
|