ವಿಶ್ವಹಿಂದು ಪರಿಷತ್ ನಾಯಕ ಸ್ವಾಮಿ ಲಕ್ಷ್ಮಣಾನಂದ್ ಸರಸ್ವತಿ ಹತ್ಯೆಯ ಹಿನ್ನೆಲೆಯಲ್ಲಿ ಆರಂಭವಾದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ ಹತ್ತು ಮಂದಿ ಬಲಿಯಾಗಿದ್ದು, ಕರ್ಫ್ಯೂ ಹೇರಿಕೆಯ ನಂತರವೂ ಹಿಂಸಾಚಾರ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಧಮಲ್ ಜಿಲ್ಲೆಯ ಫಿರಿಂಗಿಯಾ, ಟಿಕಾಬಲಿ ಮತ್ತು ಉದಯ್ ಗಿರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಹಿಂಸಾಚಾರದ ಘಟನೆಗಳು ಮುಂದುವರಿದಿವೆ ಎಂದು ಪೂಲ್ಬನಿಯಲ್ಲಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉದ್ರಿಕ್ತ ಪ್ರತಿಭಟನಾಕಾರರು ಅನೇಕ ಸ್ಥಳಗಳಲ್ಲಿ ರಸ್ತೆ ತಡೆಗಳನ್ನು ಒಡ್ಡಿದ್ದರಿಂದ, ಪೊಲೀಸರು ರಸ್ತೆ ಆಡೆತಡೆಗಳನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಂಧಮಲ್ ಜಿಲ್ಲೆಯಾದ್ಯಂತ 4ಸಾವಿರ ಪೊಲೀಸರನ್ನು ನಿಯೋಜಿಸಲಾಗಿದ್ದು, ಹಿಂದೂ ಮತ್ತು ಕ್ರಿಶ್ಚಿಯನ್ ಪ್ರತಿಭಟನಾಕಾರರು ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದರಿಂದ ಇಲ್ಲಿಯವರೆಗೆ 137 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಇತರ ಜಿಲ್ಲೆಗಳಲ್ಲಿ ಶಾಂತಿಯುತ ವಾತಾವರಣವಿದೆ ಎಂದು ಪೊಲೀಸ್ ಕೇಂದ್ರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಶುಕ್ರವಾರದಂದು ದೇಶಾದ್ಯಂತ ಕ್ರಿಶ್ಚಿಯನ್ ಶಾಲಾ-ಕಾಲೇಜ್‌ಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಕ್ರಿಶ್ಚಿಯನ್ ಸಮುದಾಯದ ಮುಖಂಡರು ತಿಳಿಸಿದ್ದಾರೆ.
ಕಂಧಮಲ್ ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ಹಿಂಸಾಚಾರದಲ್ಲಿ ತೊಡಗುವವರಿಗೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ ನೀಡಲಾಗಿದ್ದು ಅನೇಕ ಪ್ರದೇಶಗಳಲ್ಲಿ ಸೇನಾಪಡೆಗಳು ಪಥಸಂಚಲನೆ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
|