ಕೋಸಿ ನದಿಯ ಪ್ರವಾಹದಿಂದಾಗಿ ನಿರಾಶ್ರಿತ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸೇನಾ ದೋಣಿಯ ಮೂಲಕ ಕರೆದೊಯ್ಯುತ್ತಿರುವಾಗ ದೋಣಿ ಮುಳುಗಿದ ಪರಿಣಾಮ 20 ಮಂದಿ ನೀರುಪಾಲಾಗಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.
ದೋಣಿಯಲ್ಲಿ 50 ಮಂದಿ ಪ್ರವಾಹ ಪೀಡಿತರು ಹಾಗೂ ಕೆಲ ಸೇನಾಪಡೆಗಳ ಜವಾನರಿದ್ದು, ಮುರಳಿಗಂಜ್‌ನ ಮೀರ್‌ಗಂಜ್ ಬಳಿ ನದಿಯ ಪ್ರವಾಹದಿಂದಾಗಿ ನತದೃಷ್ಟ ಮುಳುಗಿ ಹೋಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಒ.ಎನ್ ಭಾಸ್ಕರ್ ತಿಳಿಸಿದ್ದಾರೆ.
ಸೇನಾಪಡೆಗಳು 32 ಮಂದಿಯನ್ನು ಪ್ರವಾಹದಿಂದ ರಕ್ಷಿಸಿವೆ. ಆದರೆ ಸೇನೆಯ ಹವಾಲ್ದಾರ್ ಸೇರಿದಂತೆ 20 ಮಂದಿ ಪ್ರವಾಹದಲ್ಲಿ ಕಾಣೆಯಾಗಿದ್ದಾರೆ ಎಂದು ಅವರು ವಿವರಿಸಿದರು.
ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ನಿಗದಿಪಡಿಸಿದ್ದ ದೋಣಿಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿದ ಪರಿಣಾಮ ದುರಂತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹೆಚ್ಚುವರಿ ಸೇನಾಪಡೆಗಳ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಮೃತದೇಹಗಳು ಹಾಗೂ ಬದುಕುಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
|