ಸಿಂಗೂರ್ ವಿವಾದವನ್ನು ಗಂಭೀರ ಸಮಸ್ಯೆ ಎಂದು ಬಣ್ಣಿಸಿರುವ ಕೇಂದ್ರ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ಇದು ರಾಜ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರುವ ಕಾರಣ ಸಿಂಗೂರ್ ಬಿಕ್ಕಟ್ಟನ್ನು ಪರಿಹರಿಸಲು ಸ್ಥಿತಿಯಲ್ಲಿ ಕೇಂದ್ರವು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೊಂದು ಗಂಭೀರ ಸಮಸ್ಯೆಯಾಗಿದ್ದು, ರಾಜ್ಯದಲ್ಲಿ ಯಾರು ಬಂಡವಾಳ ಹೂಡುತ್ತಾರೆ ಎಂಬುದು ಆ ರಾಜ್ಯ ಹಾಗು ಹೂಡಿಕೆದಾರರಿಗೆ ಸಂಬಂಧಿಸಿದ ವಿಚಾರವಾಗಿದೆ. ಇದು ಒಂದು ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿರುವ ನಿಟ್ಟಿನಲ್ಲಿ, ಈ ವಿವಾದದ ಕುರಿತಾಗಿ ಯಾವುದೇ ಕ್ರಮ ಕೈಗೊಳ್ಳಲು ಕೇಂದ್ರಕ್ಕೆ ಅಸಾಧ್ಯವಾಗಿದೆ ಎಂದು ಮುಖರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಟಾಟಾ ಸಣ್ಣ ಕಾರು ಯೋಜನೆಗೆ ಬೆಂಬಲ ಸೂಚಿಸಿದ ಮುಖರ್ಜಿ, ಕೇಂದ್ರವು ಎಂದಿಗೂ ನೂತನ ತಂತ್ರಜ್ಞಾನ ಅಭಿವೃದ್ಧಿಯ ಪರವಾಗಿದೆ ಎಂದಿದ್ದಾರೆ.
ದೇಶಕ್ಕೆ ಉದ್ಯಮೀಕರಣದ ಆವಶ್ಯಕತೆಯಿದೆ. ಇದರೊಂದಿಗೆ, ದೇಶದ ರೈತರ ಹಿತದೃಷ್ಟಿಯನ್ನೂ ಗಮನಿಸಬೇಕಾಗುತ್ತದೆ. ಆಹಾರ ಉತ್ಪಾದನೆಯನ್ನು ಹೆಚ್ಚಿಸಬೇಕಾಗುತ್ತದೆ. ಒಟ್ಟಾರೆ, ಇವೆರಡರಲ್ಲೂ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ ಎಂದು ಮುಖರ್ಜಿ ತಿಳಿಸಿದ್ದಾರೆ.
|