ಕೇಂದ್ರದಲ್ಲಿ ತೃತೀಯ ಪರ್ಯಾಯ ಪಕ್ಷದ ಪರ ಧ್ವನಿ ಎತ್ತಿರುವ ಪಶ್ಚಿಮಬಂಗಾಳ ಮುಖ್ಯಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ, ಇದು ಎಡಪಕ್ಷಗಳ ನೇತೃತ್ವದ್ದಾಗಿದ್ದು ಜನತೆಯ ಪರವಾಗಿರಬೇಕು ಎಂದು ಹೇಳಿದ್ದಾರೆ.
"ನಮಗೀಗ ತೃತೀಯ ರಂಗವೊಂದು ಬೇಕಾಗಿದೆ. ಅದರ ನೇತೃತ್ವವನ್ನು ಎಡರಂಗವು ವಹಿಸಹಬೇಕು ಮತ್ತು ಅದು ಸ್ವತಂತ್ರ ವಿದೇಶಾಂಗ ನೀತಿ, ಕೋಮು ಸೌಹಾರ್ದತೆ ಮತ್ತು ಜನತೆಯ ಪರವಾದ ನೀತಿಗಳನ್ನು ಅನುಸರಿಸಬೇಕು" ಎಂದು ಭಟ್ಟಾಚಾರ್ಜಿ ನುಡಿದರು. ಅವರು ಆಹಾರ ಚಳುವಳಿಯ ಹುತಾತ್ಮರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಎಡರಂಗದ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಯುಪಿಎ ಸರಕಾರದಿಂದ ಬೆಂಬಲ ಹಿಂತೆಗೆತ ನೋವಿನ ವಿಚಾರವಾದರೂ ಸಮಯೋಚಿತ ನಿರ್ಧಾರವಾಗಿದೆ. ಅಮೆರಿಕದೊಂದಿಗೆ ಅಣುಒಪ್ಪಂದವನ್ನು ಕಾರ್ಯಗತಗೊಳಿಸುವ ಮೂಲಕ ಮನಮೋಹನ್ ಸಿಂಗ್ ಸರಕಾರವು, ಸಾಮಾನ್ಯ ಕನಿಷ್ಠ ಕಾರ್ಯಕ್ರಮದಿಂದ ವಿಮುಖವಾಗುತ್ತಿರುವ ಕಾರಣ ಈ ಕ್ರಮವು ಅವಶ್ಯಕವಾಗಿತ್ತು ಎಂದು ಅವರು ನುಡಿದರು.
ಭಾರತ-ಅಮೆರಿಕ ಅಣುಒಪ್ಪಂದವು ಎಂದಿಗೂ ಸಾಮಾನ್ಯ ಕನಿಷ್ಠಕಾರ್ಯಕ್ರದ ಭಾಗವಾಗಿರಲಿಲ್ಲ. ಇದು ಅಣು ಒಪ್ಪಂದ ಮಾತ್ರವಲ್ಲ. ಭಾರತದ ರಾಜಕೀಯ, ಆರ್ಥಿಕತೆ, ಮತ್ತು ಸೇನೆಯ ಮೇಲೆ ನಿಯಂತ್ರಣ ಸಾಧಿಸುವುದಕ್ಕಾಗಿ ಈ ಒಪ್ಪಂದವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ನುಡಿದರು.
ಎಡಪಕ್ಷಗಳು ಎಚ್ಚರಿಕೆ ನೀಡಿದರೂ, ಕೇಂದ್ರವು ಹಣುಬ್ಬರ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅದೀಗ ಶೇಕಡ 13ಕ್ಕೇರಿದ್ದರೆ ರಾಷ್ಟ್ರೀಯ ಉತ್ಪನ್ನವು ಶೇಕಡಾ ಏಳಕ್ಕೆ ಇಳಿದಿದೆ. ಇಷ್ಟೆಲ್ಲ ಆದರೂ ಯುಪಿಎಯನ್ನು ನಾವ್ಯಾಕೆ ಬೆಂಬಲಿಸುತ್ತಿದ್ದೇವೆ ಎಂದು ಜನತೆಗೆ ಅಚ್ಚರಿಯುಂಟಾಗಿತ್ತು ಎಂದು ಆವರು ನುಡಿದರು.
ಕೇಂದ್ರವು ಹಣದುಬ್ಬರವನ್ನು ಹತ್ತಿಕ್ಕಲು ವಿಫಲವಾಗಿರುವ ಹಿನ್ನೆಲೆಯಲ್ಲಿ, ಸಾಮಾನ್ಯ ಜನತೆಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ಸರಕಾರವು ಮಾರಾಟ ತೆರಿಗೆ ಮತ್ತು ಮೇಲ್ತೆರಿಗೆಗಳನ್ನು ಕಡಿತಗೊಳಿಸಿದೆ ಎಂದು ನುಡಿದ ಮುಖ್ಯಮಂತ್ರಿ ಬುದ್ಧದೇವ್, ಈಗಾಗಲೇ ನಿರ್ಧರಿಸಿರುವಂತೆ, ಸರಕಾರವು ಕಡಿಮೆ ಬೆಲೆಯಲ್ಲಿ ಅಕ್ಕಿ, ಬೇಳೆಗಳು ಮತ್ತು ಖಾದ್ಯ ತೈಲಗಳನ್ನು ವಿತರಿಸಲಿದೆ ಎಂದು ನುಡಿದರು.
|