ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳಿಂದ ಜನತೆ ವಲಸೆ ಹೋಗುತ್ತಿರುವುದು ಮುಂದುವರಿದಿದ್ದು, ಸೋಮವಾರವೂ ಲಕ್ಷಾಂತರ ಮಂದಿ ಸುರಕ್ಷಿತ ಜಾಗಗಳಿಗೆ ತೆರಳಿದ್ದಾರೆ.
ರಾಜ್ಯಾಡಳಿತ ಹಾಗೂ ಸೇನೆಯು ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿದ್ದರೂ, ಬಳಸುತ್ತಿರುವ ಸಂಪನ್ಮೂಲಗಳು ಸಾಕಾಗುತ್ತಿಲ್ಲ. ಇನ್ನಷ್ಟು ರಕ್ಷಣಾ ಪಡೆಗಳಿಗೆ ಒತ್ತಾಯಿಸಲಾಗಿದೆ. ಸಂಕಷ್ಟದಲ್ಲಿರುವ ಜನತೆಯ ಸ್ಥಳಾಂತರಕ್ಕೆ ರಕ್ಷಣಾ ಪಡೆಯ ಮೂರೂ ದಳಗಳು ಪ್ರಯತ್ನಿಸುತ್ತಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಪ್ರಯಾಯ ಅಮ್ರಿತ್ ಹೇಳಿದ್ದಾರೆ.
ಸೇನಾಪಡೆಯ 19 ಸಮೂಹಗಳು ಮತ್ತು ನೌಕಾದಳದ ಮೂರು ಸಮೂಹಗಳು ಪರಿಹಾರ ಮತ್ತು ಸ್ಥಳಾಂತರ ಕಾರ್ಯದಲ್ಲಿ ಮಗ್ನವಾಗಿವೆ. ವಾಯುಪಡೆಯ ಆರು ಹೆಲಿಕಾಫ್ಟರುಗಳು ಆಹಾರ ಪೊಟ್ಟಣಗಳನ್ನು ಸರಬರಾಜು ಮಾಡುವಲ್ಲಿ ನಿರತವಾಗಿವೆ.
ಇದುವರೆಗೆ ಸುಮಾರು 4,67,000 ಮಂದಿಯನ್ನು ಸ್ಥಳಾಂತರಿಸಲಾಗಿದೆ ಮತ್ತು 1,50,00ಕ್ಕಿಂತ ಅಧಿಕ ಮಂದಿಗೆ ಆಶ್ರಯ ಕಲ್ಪಿಸಲಾಗಿದ್ದು, 172 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೋಸಿ ನದಿಯ ನೀರು ಮತ್ತಷ್ಟು ಪ್ರದೇಶವನ್ನು ವ್ಯಾಪಿಸುತ್ತಿದ್ದು, ನೂರಾರು ಗ್ರಾಮಗಳು ನೀರಿನಲ್ಲಿ ಮುಳುಗುತ್ತಿವೆ. ಸಹಾರ್ಸ, ಸುಪೌಲ್, ಆರಾರಿಯ, ಮಾಧೆಪುರ, ಪುರ್ನಿಯ ಜಿಲ್ಲೆಗಳ ಹೊಸ ಪ್ರದೇಶಗಳನ್ನು ನೀರು ವ್ಯಾಪಿಸುತ್ತಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನ ಮಟ್ಟ ಎರಡರಿಂದ ಮೂರು ಅಡಿಗಳಷ್ಟು ಮೇಲೇರಿದೆ.
|