ಅರವತ್ತನಾಲ್ಕು ದಿನಗಳ ನಿರಂತರ ಪ್ರಕ್ಷುಬ್ಧತೆಯಿಂದ ಕೊನೆಗೂ ಜಮ್ಮು ನಗರವು ಸಹಜತೆಯತ್ತ ಮರಳುತ್ತಿದ್ದು, ಸೋಮವಾರ ಅಂಗಡಿ ಮುಗ್ಗಟ್ಟುಗಳು ತೆರೆದಿದ್ದು, ರಸ್ತೆಗಳಲ್ಲಿ ವಾಹನ ಓಡಾಟ ಕಂಡು ಬರುತ್ತಿತ್ತು.
"ಜಮ್ಮು ಮತ್ತು ಸುತ್ತುಮುತ್ತಲ ಪ್ರದೇಶ ಸಹಜ ಸ್ಥಿತಿಗೆ ಮರಳಿದೆ. ಎರಡು ತಿಂಗಳ ಬಳಿಕ ಎಲ್ಲ ಮಾರುಕಟ್ಟೆ ಪ್ರದೇಶಗಳು, ಸರಕಾರಿ ಕಚೇರಿಗಳು, ಶಾಲೆಗಳು, ಬ್ಯಾಂಕುಗಳು ಮತ್ತು ವಿಶ್ವವಿದ್ಯಾನಿಲಯಗಳು ಪುನಾರಂಭಗೊಂಡಿವೆ ಮತ್ತು ರಸ್ತೆಗಳಲ್ಲಿ ವಾಹನಗಳು ಓಡಾಡುತ್ತಿವೆ" ಎಂದು ಪೊಲೀಸರು ತಿಳಿಸಿದ್ದಾರೆ.
ರಘುನಾಥ್ ಬಜಾರ್, ರೆಸಿಡೆನ್ಸಿ ರಸ್ತೆ, ಪುರಾನಿ ಮಂಡಿ ಮತ್ತು ಜೈನ್ ಬಜಾರ್ ಪ್ರದೇಶಗಳಲ್ಲಿ ಅಂಗಡಿಗಳು ಅಶ್ರುವಾಯು ಸೆಲ್‌ಗಳು, ಅರ್ಧ ಸುಟ್ಟ ಟಯರ್‌ಗಳು ಮತ್ತು ಪ್ರತಿಕೃತಿಗಳಿಂದ ಮಲಿನವಾಗಿದ್ದು, ಅಂಗಡಿಗಳವರು ಅವುಗಳನ್ನು ಶುಚಿಗೊಳಿಸುತ್ತಿದ್ದುದು ಕಂಡು ಬರುತ್ತಿತ್ತು.
ನಗರವು ಇದೀಗ ಶುಭ್ರವಾಗಿದ್ದು, ಎಲ್ಲ ಕಚಡಾವಸ್ತುಗಳನ್ನು ತೊಡೆದು ಹಾಕಲಾಗಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿ ಹೇಳಿದ್ದಾರೆ.
ಜಮ್ಮು, ಸಾಂಬ, ಉದಾಮ್‌ಪುರ, ಕತುವ ಮತ್ತು ರೆಸಾಯ್‌ಗಳಲ್ಲಿ ಕಳೆದ ರಾತ್ರಿ ಕರ್ಫ್ಯೂ ಹಿಂತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದಾಗ್ಯೂ, ಪೂಂಛ್ ಮತ್ತು ಕಿಸ್ತಾವರಗಳಲ್ಲಿ ಕರ್ಫ್ಯೂ ಮುಂದುವರಿದಿದೆ. ಈ ಪ್ರದೇಶಗಳಲ್ಲೂ ಕರ್ಫ್ಯೂ ಹಿಂತೆಗೆಯಲು ಪೊಲೀಸರು ಯೋಚಿಸಿದ್ದಾರೆ.
ಅಮರನಾಥ ಭೂವಿವಾದ ಹಿನ್ನೆಲೆಯಲ್ಲಿ ನಡೆದ ಎಡೆಬಿಡದ ಪ್ರತಿಭಟನೆಗಳಿಂದಾಗಿ ಜಮ್ಮು ಹಾಗೂ ಸುತ್ತುಮುತ್ತಲ ಪ್ರದೇಶಗಳಲ್ಲಿ ಸಾಕಷ್ಟು ಹಾನಿಯುಂಟಾಗಿದೆ.
|