ನವದೆಹಲಿ: ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಆಕೆಯ ಸಮ್ಮತಿಯೊಂದಿಗೆ ದೈಹಿಕ ಸಂಬಂಧ ನಡೆಸಿದ್ದಲ್ಲಿ, ಇದೂ ಸಹ ಅತ್ಯಾಚಾರವೆಂದೇ ಪರಿಗಣಿತವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮತ್ತು ಪ್ರಕರಣರಣಕ್ಕೆ ಸಂಬಂಧಿಸಿದಂತೆ ಯಾವುದೇ ರಿಯಾಯಿತಿಯೂ ಇರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತನ್ನ ಮಗಳು ಈಗಾಗಲೇ ಇತರೊಬ್ಬ ವ್ಯಕ್ತಿಯೊಂದಿಗೆ ವಿವಾಹವಾಗಿರುವ ಕಾರಣ, ಅಪರಾಧಿಯ ಕೃತ್ರಿಮ ಕಾರ್ಯವನ್ನು ಮಾಫಿ ಮಾಡಬೇಕು ಎಂಬುದಾಗಿ, ಬಲಿಪಶು ಹುಡುಗಿಯ ತಂದೆ ನ್ಯಾಯಾಲಯಕ್ಕೆ ಅರಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ, ನ್ಯಾಯಾಲಯವು ಅಪರಾಧಿಗೆ ವಿಧಿಸಿದ್ದ ಏಳು ವರ್ಷಗಳ ಕಾಲದ ಕಠಿಣ ಶಿಕ್ಷೆಯನ್ನು ಮೂರು ವರ್ಷಗಳಿಗೆ ಇಳಿಸಿದೆ.
ತನ್ನದು ಗ್ರಾಮೀಣ ಹಿನ್ನೆಲೆಯಾಗಿದ್ದು, ಬಲಿಪಶು ಹುಡುಗಿ ಮತ್ತು ತಾನು ಪರಸ್ಪರ ಪ್ರೇಮಿಸುತ್ತಿದ್ದು, ಪರಸ್ಪರ ಸಮ್ಮತಿಯಿಂದಲೇ ನಡೆದ ಕ್ರಿಯೆ ಸೇರಿದಂತೆ ಹಲವು ಅಂಶಗಳ ಆಧಾರದಲ್ಲಿ, ಅಪರಾಧಿಯ ವಿರುದ್ಧ ನ್ಯಾಯಾಲಯ ಸಹಾನುಭೂತಿ ತೋರಬೇಕು ಎಂಬ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿದೆ.
ಈ ಘಟನೆ ಸಂಭವಿಸಿದಾಗ ಹುಡುಗಿಯು ಹದಿನಾರರೊಳಗಿನ ಹರೆಯದವಳಾಗಿದ್ದಳು. ಈ ಇಬ್ಬರು ಪರಸ್ಪರ ಪ್ರೇಮಿಸುತ್ತಿದ್ದರು, ಮತ್ತು ತನ್ನ ಸಮ್ಮತಿಯಿಂದಲೇ ಈ ಕ್ರೀಯೆ ನಡೆದಿದೆ ಎಂಬುದಾಗಿ ಬಲಿಪಶು ಹುಡುಗಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಳು ಕೂಡ. ಆದರೆ ಆಕೆ 16ರ ಹರೆಯದೊಳಗಿನವಳಾದ ಕಾರಣ ಈ ಅಂಶಗಳಿಗೆ ಪ್ರಸ್ತುತತೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ಅರಿಜಿತ ಪಸಾಯತ್ ಮತ್ತು ಮುಕುಂದಾಕಂ ಶರ್ಮಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಭಾರತೀಯ ದಂಡ ಸಂಹಿತೆಯ 375(6)ರ ವಿಧಿ ಪ್ರಕಾರ, 16ರ ಹರೆಯದ ಬಾಲಕಿಯೊಂದಿಗಿನ ಲೈಂಗಿಕ ಕ್ರಿಯೆ ಅತ್ಯಾಚಾರ ಎಂದೇ ಪರಿಗಣಿತವಾಗುತ್ತದೆ. ಈ ಪ್ರಕರಣದಲ್ಲಿ ಕುಮಾರ್ ಎಂಬಾತ ತನ್ನ ಗೆಳತಿಯೊಂದಿಗೆ ಈ ಕೃತ್ಯ ಎಸಗಿದ್ದು, ಹುಡುಗಿಯ ಹೆತ್ತವರು ಕುಮಾರ್ ವಿರುದ್ಧ ತಮ್ಮ ಪುತ್ರಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.
ಸೆಶನ್ಸ್ ಕೋರ್ಟ್ ಏಳು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. ಆದರೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್, ಈ ಇಬ್ಬರು ಪ್ರೇಮಿಗಳಾಗಿದ್ದ ಕಾರಣ ಪ್ರಕರಣದ ಕುರಿತು ಔದಾರ್ಯ ತೋರಿದ್ದು, ಈಗಾಗಲೇ ಆತ ಅನುಭವಿಸಿದ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿತ್ತು.
|