ರಾಜಸ್ಥಾನದ ಕೋಟಾ ಎಂಬಲ್ಲಿಂದ ನಿಷೇಧಿತ ಸಂಘಟನೆ ಸಿಮಿಯ ಮುಖ್ಯಸ್ಥನೊಬ್ಬ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ನಿಷೇಧಿತ ಉಗ್ರವಾದಿ ಸಂಘಟನೆ ಸಿಮಿಯ ಮುಖ್ಯಸ್ಥ ಮನ್ವರ್ ಹುಸೇನ್ ಹಾಗೂ ಇತರ ಮೂವರನ್ನು ಸೋಮವಾರ ವಿಶೇಷ ಕಾರ್ಯಪಡೆ ಬಂಧಿಸಿರುವುದಾಗಿ ಕ್ರೈಂ ಬ್ರಾಂಚ್ ಡಿಜಿಪಿ ಎ.ಕೆ.ಜೈನ್ ತಿಳಿಸಿದ್ದಾರೆ.
ಕೋಟಾದಲ್ಲಿ ಹುಸೇನ್ ಟೈಲರಿಂಗ್ ಶಾಪ್ ಹೊಂದಿದ್ದ ಎಂದು ಅವರು ಹೇಳಿದ್ದಾರೆ.
ಬಂಧಿತ ಇತರ ಮೂವರೆಂದರೆ, ಕೋಟಾದವರಾದ ಅತಿಕ್ ಅಲಿಯಾಸ್ ಅತ್-ಉರ್-ರೆಹ್ಮಾನ್, ನದೀಂ ಅಖ್ತರ್ ಮತ್ತು ಬರನ್ ಜಿಲ್ಲೆಯ ಮೊಹಮ್ಮದ್ ಇಲಿಯಾಸ್. ಬಂಧಿತರೆಲ್ಲರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, 11 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.
ಇವರನ್ನು ಜೈಪುರ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿಲ್ಲ, ಬದಲಿಗೆ ಜುಲೈ 26ರಂದು ಅಹಮದಾಬಾಬ್‌ನಲ್ಲಿ ನಡೆಸಲಾಗಿರುವ ಸರಣಿ ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಿಮಿ ಕಾರ್ಯಕರ್ತ ಸಾಜಿದ್ ಮನ್ಸೂರಿಯೊಂದಿಗಿನ ಸಾಹಚರ್ಯಕ್ಕಾಗಿ ಬಂಧಿಸಲಾಗಿದೆ ಎಂದು ಜೈನ್ ಸ್ಪಷ್ಟಪಡಿಸಿದ್ದಾರೆ.
|