ಬಿಎಂಡಬ್ಲ್ಯೂ ಹಿಟ್ ಆಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿಯ ನ್ಯಾಯಾಲಯ ಒಂದು, ಪ್ರಕರಣದ ಪ್ರಮುಖ ಆರೋಪಿ ಸಂಜೀವ್ ನಂದಾ ಮತ್ತು ಇತರ ಮೂವರನ್ನು ದೋಷಿಗಳೆಂದು ತೀರ್ಪಿತ್ತಿದೆ.
ಆದರೆ, ಸಹ ಆರೋಪಿ ಮಣಿಕ್ ಕಪೂರ್‌ನನ್ನು ಪಟಿಯಾಲಾ ಹೌಸ್ ಕೋರ್ಟ್ ನಿರ್ದೋಷಿ ಎಂದು ಪರಿಗಣಿಸಿದೆ. ನ್ಯಾಯಾಲಯವು ನಾಳೆ ಮಧ್ಯಾಹ್ನ ಮತ್ತೆ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದ್ದು, ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದೆ.
ನಂದಾ ಚಲಾಯಿಸುತ್ತಿದ್ದನೆಂದು ಹೇಳಲಾಗಿರುವ ಬಿಎಂಡಬ್ಲ್ಯು ಕಾರು ಹರಿದು ಲೋಧಿ ಕಾಲನಿ ಪ್ರದೇಶದಲ್ಲಿ ಮೂವರು ಪೊಲೀಸರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದರು. ಸೆಕ್ಷನ್ 304(2)ರನ್ವಯ, ಹೆಚ್ಚುವರಿ ಸತ್ರ ನ್ಯಾಯಾಧೀಶ ವಿನೋದ್ ಕುಮಾರ್, ನಂದಾ ಶಿಕ್ಷಾರ್ಹ ನರಹತ್ಯೆ ಅಪರಾಧ ಎಸಗಿರುವುದಾಗಿ ತೀರ್ಮಾನಿಸಿದ್ದಾರೆ. ಈ ಅಪರಾಧಕ್ಕೆ ಗರಿಷ್ಠ 10 ವರ್ಷಗಳ ಶಿಕ್ಷೆ ವಿಧಿಸಬಹುದಾಗಿದೆ.
ನಂದಾ ಅಲ್ಲದೆ, ಉದ್ಯಮಿ ರಾಜೀವ್ ಗುಪ್ತಾ ಹಾಗೂ ಆತನ ಇಬ್ಬರು ಉದ್ಯೋಗಿಗಳಾದ ಭೋಲಾನಾಥ್ ಮತ್ತು ಶ್ಯಾಮ್ ಸಿಂಗ್ ರಾಣಾ ಅವರುಗಳನ್ನು ಸಾಕ್ಷ್ಯಾಧಾರಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸಿರುವುದಕ್ಕಾಗಿ ದೋಷಿಗಳೆಂದು ನ್ಯಾಯಾಲಯ ತೀರ್ಮಾನಿಸಿದೆ. ಇವರು ಕಾರಿಗೆ ಅಂಟಿದ್ದ ರಕ್ತದ ಕಲೆ ಹಾಗೂ ಮೃತರ ಅಂಗಾಂಶದ ತುಣುಕುಗಳನ್ನು ತೊಳೆದು ಹಾಕಿದ್ದು, ಸಾಕ್ಷಿನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಒಂಭತ್ತು ವರ್ಷಗಳ ಹಿಂದೆ ಈ ಪ್ರಕರಣ ಸಂಭವಿಸಿದ್ದು, ಕಳೆದ ಆಗಸ್ಟ್ 26ರಂದು ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿತ್ತು.
ಶಸ್ತ್ರಾಸ್ತ್ರ ವ್ಯಾಪಾರಿ ಸುರೇಶ್ ನಂದಾ ಪುತ್ರ ಹಾಗೂ ನೌಕಾಸೇನೆಯ ಮಾಜಿ ಮುಖ್ಯಸ್ಥ ಎಸ್.ಎಂ.ನಂದಾ ಅವರ ಮೊಮ್ಮೆಗನಾಗಿರುವ ಸಂಜೀವ್ ನಂದಾನನ್ನು ಸೆಕ್ಷನ್ 304(2) ಸೇರಿದಂತೆ ಹಲವಾರು ಸೆಕ್ಷನ್‌ಗಳಡಿ ವಿಚಾರಣೆಗೊಳಪಡಿಸಲಾಗಿದೆ.
|