ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಮಾಧ್ಯಮ ಸಲಹಾಗಾರರು ಮತ್ತು ಅವರ ಅತ್ಯಂತ ಆಪ್ತರೂ ಆಗಿದ್ದ, ಎಚ್.ವೈ.ಶಾರದಾ ಪ್ರಸಾದ್ ಮಂಗಳವಾರ ವಿಧಿವಶರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಇತ್ತೀಚಿನ ಕೆಲವರ್ಷಗಳಿಂದ ಪರ್ಕಿನ್‌ಸನ್ಸ್ ಖಾಯಿಲೆ ಪೀಡಿತರಾಗಿದ್ದ ಶಾರದಾ ಪ್ರಸಾದ್ ಕೊನೆಗಾಲದಲ್ಲಿ ಹಾಸಿಗೆ ಹಿಡಿದಿದ್ದರು ಎಂದು ಅವರು ನಿಕಟ ಸಂಬಂಧಿಗಳು ಹೇಳಿದ್ದಾರೆ.
ಮೃತರು, ಇಂದಿರಾಗಾಂಧಿ ಅಧಿಕಾರದಲ್ಲಿದ್ದಷ್ಟು ಕಾಲವೂ ಅವರ ಮಾಧ್ಯಮ ಸಲಹಾಗಾರರು, ಅವರ ಭಾಷಣ ಬರಹಗಾರರಾಗಿದ್ದು ಅವರ ವಿಶ್ವಾಸ ಗಳಿಸಿದ್ದರು. ಇದಲ್ಲದೆ, ಪ್ರಧಾನಿಗಳಾಗಿದ್ದ ಮೊರಾರ್ಜಿ ದೇಸಾಯಿ ಮತ್ತು ರಾಜೀವ್ ಗಾಂಧಿ ಅವರಿಗೂ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ . ಶಾರದಾ ಪ್ರಸಾದ್ ಅವರಿಗೆ 2000ದಲ್ಲಿ ಪದ್ಮಭೂಷಣ ಪುರಸ್ಕಾರ ಮತ್ತು 2001ರಲ್ಲಿ ರಾಷ್ಟ್ರೀಯ ಭಾವೈಕ್ಯತೆಗೆ ಕೊಡಮಾಡುವ ಇಂದಿರಾಗಾಂಧಿ ಪುರಸ್ಕಾರವನ್ನು ನೀಡಲಾಗಿತ್ತು.
ಮೈಸೂರಿನವರಾಗಿರುವ ಶಾರದಾ ಪ್ರಸಾದ್ ಅವರು ರಾಷ್ಟ್ರಕ್ಕೆ ಲಭಿಸಿದ ಮಹಾನ್ ಉಡುಗೊರೆ ಎಂದು ಬಣ್ಣಿಸಿರುವ ಭಾರತದ ಮಾಜಿ ಮುಖ್ಯನ್ಯಾಯಾಧೀಶ ಎಂ.ಎನ್.ವೆಂಕಟಾಚಲಯ್ಯ, ಸರಳತೆಯ ಪ್ರತೀಕವಾಗಿದ್ದ ಅವರು, ಅಸಾಧಾರಣ ಕಲಿಕಾ ಶಕ್ತಿಯೊಂದಿಗೆ ಮಹಾನ್ ವಿದ್ವತ್ತನ್ನು ಹೊಂದಿದ್ದರು ಎಂದು ಹೇಳಿದ್ದಾರೆ.
ಪ್ರಸಾದ್ ಅವರು ತಮ್ಮ ಪತ್ನಿ ಕಮಲಮ್ಮ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
|