ಮುಂದುವರಿದ ವಿರೋಧ, ಪ್ರತಿಭಟನೆ ಇತ್ಯಾದಿಗಳಿಂದ ರೋಸಿ ಹೋಗಿರುವ ಟಾಟಾ ಮೋಟಾರ್ಸ್, ಎಡಪಂಥೀಯ ಆಳ್ವಿಕೆಯ ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ನ್ಯಾನೋ ಕಾರು ತಯಾರಿಕಾ ಯೋಜನೆಯನ್ನು ಕೈಬಿಡಲು ನಿರ್ಧರಿಸಿರುವಂತೆಯೇ, ನಿರ್ಧಾರ ಮರುಪರಿಶೀಲಿಸುವಂತೆ ಎಡಪಕ್ಷಗಳು ಒತ್ತಾಯಿಸಿವೆ.
ಪುಟ್ಟ ಕಾರು ತಯಾರಿಕಾ ಕಾರ್ಯವನ್ನು ಸ್ಥಗಿತಗೊಳಿಸಿರುವ ಟಾಟಾ, ನಿರ್ಧಾರ ಮರು ಪರಿಶೀಲಿಸುವಂತೆ ಪಶ್ಚಿಮ ಬಂಗಾಳದ ಎಡರಂಗದ ಅಧ್ಯಕ್ಷ ಬಿಮನ್ ಬೋಸ್ ಅವರು ಕೋರಿದ್ದು, ಸಮಸ್ಯೆಗೆ ಪರಿಹಾರ ರೂಪಿಸುವ ಕಾರ್ಯವು ಪ್ರಗತಿಯಲ್ಲಿರುವಾಗ ಯೋಜನೆ ಸ್ಥಗಿತಗೊಳಿಸುವ ನಿರ್ಧಾರ ದುರೃಷ್ಟಕರ ಎಂದು ಬಣ್ಣಿಸಿದ್ದಾರೆ.
ಈ ಮಧ್ಯೆ, ಯೋಜನೆ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿರುವ 'ಬೆಂಕಿ ಚೆಂಡು' ನಾಯಕಿ ಎಂದೇ ಬಿಂಬಿತವಾಗಿರುವ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿ, ಟಾಟಾ ನೌಕರರು ಕೆಲಸಕ್ಕೆ ಹಾಜರಾಗದಿರುವುದಕ್ಕೂ ತಮಗೂ ಸಂಬಂಧವಿಲ್ಲ, ಅಲ್ಲಿ ಮಾಮೂಲಿ ಕಾರ್ಯ ಮುಂದುವರಿಯಬೇಕೆಂದು ತಮ್ಮ ಪಕ್ಷವು ಬಯಸುತ್ತದೆ ಎಂದು ಹೇಳಿದ್ದಾರೆ.
ನಾವು ಟಾಟಾ ಯೋಜನೆಯ ಕೆಲಸಕ್ಕೆ ಅಡ್ಡಿ ಮಾಡಿಲ್ಲ. ಆದರೆ ಕೆಲಸಗಾರರೇ ಬಾರದಿದ್ದರೆ ನಾವೂ ಏನೂ ಮಾಡುವಂತಿಲ್ಲ ಎಂದು ದೇಶಾದ್ಯಂತ ಔದ್ಯಮಿಕ ವಲಯದ ಕೆಂಗಣ್ಣಿಗೆ ಗುರಿಯಾಗಿರುವ ಮಮತಾ ಪ್ರತಿಕ್ರಿಯೆ ನೀಡಿದ್ದಾರೆ.
|