ಇತ್ತೀಚಿನ ದಿನಗಳಲ್ಲಿ ಶ್ರೇಷ್ಠ ಯುವ ಪ್ರತಿಭೆಗಳಲ್ಲೊಬ್ಬರಿಂದ ನಿರ್ದೇಶಿಸಲ್ಪಟ್ಟ ಸ್ಪೇನ್ ದೇಶದ ಥ್ರಿಲ್ಲರ್ 'ಪಡ್ರೆ ನ್ಯೂಸ್ಟ್ರೋ' ಚಲನ ಚಿತ್ರವು ಎನ್‌ಡಿಟಿವಿ ಲೂಮೀರ್ ಮೂಲಕ ಸೆಪ್ಟೆಂಬರ್ 5ರಂದು ದೆಹಲಿ, ಮುಂಬಯಿ ಮತ್ತು ಬೆಂಗಳೂರುಗಳ ಪಿವಿಆರ್ ಸಿನೆಮಾ ಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ.
ತಮ್ಮ ಚೊಚ್ಚಲ ನಿರ್ದೇಶನದ ಚಿತ್ರದಲ್ಲೇ ಗಮನ ಸೆಳೆದಿರುವ ಯುವ ನಿರ್ದೇಶಕ ಕ್ರಿಸ್ಟೋಫರ್ ಜಾಲಾ, ಈ ಸಸ್ಪೆನ್ಸ್ ಭರಿತ ಕಥೆಗೆ ತಮ್ಮದೇ ಆದ ಗಡಿಯಾಚೆಗಿನ ಅನುಭವಗಳನ್ನು ಸೇರಿಸಿ ಅಸ್ತಿತ್ವ ಮತ್ತು ನೈತಿಕತೆಯ ಜೀವಂತಿಕೆ ತುಂಬಿ, ಎಲ್ಲರೂ ನೋಡಲೇಬೇಕಾದ ಚಿತ್ರವಾಗಿಸಿದ್ದಾರೆ.
ಪಡ್ರೆ ನ್ಯೂಸ್ಟ್ರೋ ಎಂಬುದು ಕಳವಾದ ವ್ಯಕ್ತಿತ್ವಗಳ ಕುರಿತ ಸಸ್ಪೆನ್ಸ್ ಭರಿತ ನಾಟಕವಾಗಿದೆ. ಇಲ್ಲಿ ಪೆಡ್ರೋ ಮತ್ತು ಜುವಾನ್ ಎಂಬಿಬ್ಬರು ವಲಸಿಗರು, ನ್ಯೂಯಾರ್ಕ್‌ಗೆ ತೆರಳುವ ಹಾದಿಯಲ್ಲಿ ತಮ್ಮ ವ್ಯಕ್ತಿತ್ವವನ್ನು ಗೋಜಲಿನಲ್ಲಿ ಸಿಲುಕಿಸಿಕೊಳ್ಳುತ್ತಾರೆ. ಪೆಡ್ರೋನ ಪರಿತ್ಯಕ್ತ ತಂದೆ ಡೀಗೋನ ಸಂಪತ್ತು ಮತ್ತು ವಿಶ್ವಾಸವನ್ನು ಗಳಿಸುವ ನಿಟ್ಟಿನಲ್ಲಿ ಜುವಾನ್, ಪೆಡ್ರೋ ಆಗಿ ಬದಲಾಗುತ್ತಾನೆ.
ಯಾವುದು ಕೂಡ ಕಂಡಷ್ಟು ಸರಳವಾಗಿಲ್ಲ ಎಂಬ ತತ್ವ ಅನುಸರಿಸುತ್ತಿರುವ ಈ ಜಗತ್ತಿನಲ್ಲಿ ವ್ಯಕ್ತಿತ್ವ ಮತ್ತು ನೈತಿಕತೆ ಮುಂತಾದ ಸೂಕ್ಷ್ಮ ವಿಚಾರಗಳು ಕ್ರಿಸ್ಟೋಫರ್ ಅವರ ಚೊಚ್ಚಲ ಚಿತ್ರದಲ್ಲಿ ಸಾಕಷ್ಟು ಗಮನ ಸೆಳೆಯುತ್ತವೆ. ಮತ್ತಷ್ಟು ಆಳವಾಗಿ ನೋಡಿದರೆ, ಈ ಚಿತ್ರವು ಕೌಟುಂಬಿಕ ಸಂಬಂಧಗಳು ಮತ್ತು ನೈತಿಕತೆಯ ಸಂದಿಗ್ಧತೆಯನ್ನೂ ವಿವರಿಸುತ್ತದೆ.
ಸೆಪ್ಟೆಂಬರ್ 11ರ ಅಮೆರಿಕ ದಾಳಿಯ ಬಳಿಕ, ನ್ಯೂಯಾರ್ಕ್ ಪಟ್ಟಣವು ಸಂಪೂರ್ಣವಾಗಿ ಬದಲಾಗಿರುವ ಸೂಕ್ಷ್ಮ ವಿಚಾರವನ್ನು ಪಡ್ರೆ ನ್ಯೂಸ್ಟ್ರೋದಲ್ಲಿ ಕ್ರಿಸ್ಟೋಫರ್ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದ್ದರು. ಇತರರಂತೆಯೇ ಕ್ರಿಸ್ಟೋಫರ್ ಅವರು ಕೂಡ ವಿಶ್ವ ವ್ಯಾಪಾರ ಕೇಂದ್ರದಲ್ಲಿ ಪರಿಹಾರ ಕಾರ್ಯಾಚರಣೆಗೆ ನೆರವಾಗುವ ನಿಟ್ಟಿನಲ್ಲಿ ಧಾವಿಸಿದ್ದರು. ಅಷ್ಟೆಲ್ಲಾ ವಿಧ್ವಂಸಕ ಕೃತ್ಯ, ಅವಶೇಷಗಳ ನಡುವೆ, ಕ್ರಿಸ್ಟೋಫರ್ ಅವರು ನ್ಯೂಯಾರ್ಕ್ ಪಟ್ಟಣದ ಸಂವೇದನೆಯನ್ನು ಅರ್ಥೈಸಿಕೊಂಡರು.
ಪಡ್ರೆ ನ್ಯೂಸ್ಟ್ರೋದಲ್ಲಿ ಸುಮಾರು 20 ರಾಷ್ಟ್ರಗಳ ಸಿಬ್ಬಂದಿಗಳ ಶ್ರಮವಿದೆ ಎಂಬುದು ಗಮನಿಸಬೇಕಾದ ಸಂಗತಿ.
|