ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದದ ವಿಚಾರದಲ್ಲಿ ಪ್ರಧಾನಿ ಸಂಸತ್ ಮತ್ತು ದೇಶವನ್ನು ತಪ್ಪು ದಾರಿಗೆ ಎಳೆದಿರುವುದಾಗಿ ವಿರೋಧ ಪಕ್ಷವಾದ ಭಾರತೀಯ ಜನತಾ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಡಾ.ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಗುರುವಾರ ಒತ್ತಾಯಿಸಿದೆ.
ಬಿಜೆಪಿಯ ಹಿರಿಯ ಮುಖಂಡರಾದ ಅರುಣ್ ಶೌರಿ ಮತ್ತು ಯಶವಂತ್ ಸಿನ್ನಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅಲ್ಲದೇ ಭಾರತ-ಅಮೆರಿಕ ಪರಮಾಣು ಒಪ್ಪಂದದಲ್ಲಿ ಯುಪಿಎ ಸರ್ಕಾರ ದೇಶದ ಜನರನ್ನು ತಪ್ಪು ದಾರಿಗೆ ಎಳೆದಿದೆ. ಆ ನಿಟ್ಟಿನಲ್ಲಿ 'ರಹಸ್ಯ ಪತ್ರ'ದ ಅಂಶಗಳ ಕುರಿತು ಪರಿಶೀಲನೆ ನಡೆಸಲು ವಿಶೇಷ ಅಧಿವೇಶನ ಕರೆಯಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.
ಅಣುಬಂಧದ ವಿಚಾರದಲ್ಲಿ ಯುಪಿಎ ಸಂಸತ್ ಅನ್ನು ದಾರಿ ತಪ್ಪಿಸಿರುವುದಾಗಿ ಆರೋಪಿಸಿದ ಬಿಜೆಪಿ, ಇದರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸುಳ್ಳಿನ ಮುಖವಾಡ ಮತ್ತೊಮ್ಮೆ ಬಟಾಬಯಲಾಗಿದೆ ಎಂದು ಕಟುವಾಗಿ ಟೀಕಿಸಿದೆ.
|