ಅಣ್ವಸ್ತ್ರ ಪರೀಕ್ಷೆ ನಡೆಸಿದಲ್ಲಿ ಭಾರತಕ್ಕೆ ಅಣು ಪೂರೈಕೆ ಇಲ್ಲ ಎಂಬ ಅಮೆರಿಕದ ಹೇಳಿಕೆಯನ್ನು ನಿರ್ಲಕ್ಷಿಸಿರುವ ಕಾಂಗ್ರೆಸ್, ಭಾರತ-ಅಮೆರಿಕ ನಾಗರಿಕ ಅಣು ಒಪ್ಪಂದದಡಿಯ 123 ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಬದ್ಧವಾಗಿರಬೇಕಿರುವುದರಿಂದ ಭಯಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದೆ.
ಅಮೆರಿಕ ಅಂತಹ ಯಾವುದೇ ಹೇಳಿಕೆ ನೀಡಿದ್ದರೂ ಅದು ಪ್ರಾಮುಖ್ಯವಲ್ಲ, ನಾವು ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರು 2005ರ ಜುಲೈ 18ರಂದು ನೀಡಿರುವ ಜಂಟಿ ಹೇಳಿಕೆಗೆ ಬದ್ಧವಾಗಿದ್ದೇವೆ ಎಂದು ಎಐಸಿಸಿ ವಕ್ತಾರ ವೀರಪ್ಪ ಮೊಯ್ಲಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಜಂಟಿ ಹೇಳಿಕೆಯಲ್ಲಿ ಭಾರತವನ್ನು ಅತ್ಯಾಧುನಿಕ ಅಣು ತಂತ್ರಜ್ಞಾನ ಹೊಂದಿರುವ ರಾಷ್ಟ್ರವಾಗಿ ಪರಿಗಣಿಸಲಾಗಿದ್ದು, ಇದು ಅಣ್ವಸ್ತ್ರಗಳನ್ನು ಹೊಂದಿರುವ ರಾಷ್ಟ್ರಕ್ಕೆ ಸಮವಾಗಿದೆ ಎಂದು ಅವರು ಹೇಳಿದ್ದಾರೆ. ಭಾರತವು ಅಣ್ವಸ್ತ್ರಗಳ ಪರೀಕ್ಷೆ ನಡೆಸಿದಲ್ಲಿ ಅಮೆರಿಕ ಅಣುಪೂರೈಕೆ ಮಾಡದು ಎಂಬುದಾಗಿ ಅಮೆರಿಕ ಆಡಳಿತೆಯು ಅಮೆರಿಕ ಕಾಂಗ್ರೆಸ್‌ಗೆ ಬರೆದಿರುವ ಪತ್ರವನ್ನು ಪ್ರಸ್ತಾಪಿಸಿದ ಮೊಯ್ಲಿ ಈ ಹೇಳಿಕೆ ನೀಡಿದ್ದಾರೆ.
ಒಂಭತ್ತು ತಿಂಗಳಿನಿಂದ ರಹಸ್ಯವಾಗಿದ್ದ ಈ ವಿಶೇಷ ಪತ್ರವನ್ನು ಬುಧವಾರ ಅಮೆರಿಕ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಹೋವರ್ಡ್ ಎಲ್ ಬರ್ಮನ್ ಬಹಿರಂಗ ಪಡಿಸಿದ್ದು, ಪತ್ರವು ಅಮೆರಿಕದ ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ.
ಪ್ರಧಾನಿ ಅವಸರದ ಸಭೆ ಅಮೆರಿಕ ಆಡಳಿತೆಯ ಈ ಪತ್ರದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದಲ್ಲಿ, ಭಾರತಕ್ಕೆ ಅಣುಪೂರೈಕೆ ಇಲ್ಲ ಎಂಬ ಅಂಶವು ಅಡಕಗೊಂಡಿರುವ ವಿಚಾರ ಬಹಿರಂಗಗೊಳ್ಳುತ್ತಲೇ ಪ್ರಧಾನಿ ಮನಮೋಹನ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಹಾಗೂ, ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ.ನಾರಾಯಣನ್ ಅವರೊಂದಿಗೆ ಈ ಬೆಳವಣಿಗೆಗಳ ಕುರಿತು ಚರ್ಚಿಸಲು ತುರ್ತು ಸಭೆ ನಡೆಸಿದ್ದಾರೆ.
ಅಮೆರಿಕದ ವಾಶಿಂಗ್ಟನ್ ಪೋಸ್ಟ್ ಈ ವಿಚಾರ ಬಹಿರಂಗ ಪಡಿಸಿದ ನಂತರವೂ, ರಾಷ್ಟ್ರದ ರಕ್ಷಣಾ ವ್ಯವಸ್ಥೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂಬುದಾಗಿಯೇ ಕಾಂಗ್ರೆಸ್ ಹೇಳುತ್ತಿದೆ. ಅಲ್ಲದೆ ಉಭಯ ರಾಷ್ಟ್ರಗಳು 2005ರ ಜುಲೈ 18ರ ಹೇಳಿಕೆಗೆ ಬದ್ಧವೆಂದು ಪುನರುಚ್ಛರಿಸಿದೆ.
ನಿಲುವು ಸಮರ್ಥನೀಯ ಏತನ್ಮಧ್ಯೆ, ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಸಿಪಿಐ-ಎಂ, ಭಾರತ-ಅಮೆರಿಕ ಅಣುಒಪ್ಪಂದಕ್ಕೆ ತೋರಿದ ವಿರೋಧ ಸಮರ್ಥಿಸಲ್ಪಟ್ಟಿದೆ ಎಂದು ಹೇಳಿದೆ.
ಅಮೆರಿಕದ ಮುಂಚೂಣಿಯ ಪತ್ರಿಕೆಯೊಂದು, ಅಮೆರಿಕ ಅಧ್ಯಕ್ಷ ಬುಷ್ ಅಮೆರಿಕ ಕಾಂಗ್ರೆಸ್‌ಗೆ ಬರೆದಿರುವ 26 ಪುಟಗಳ ಪತ್ರವನ್ನು ಪ್ರಕಟಿಸಿದ್ದು, ಇದರಲ್ಲಿ ಅಣು ಪೂರೈಕೆಗಾಗಿ ಭಾರತಕ್ಕೆ ವಿಧಿಸಿರುವ ಷರತ್ತು ಗಳನ್ನು ಒಂಭತ್ತು ತಿಂಗಳಿಂದ ರಹಸ್ಯವಾಗಿರಿಸಲಾಗಿದೆ ಎಂದು ಸಿಪಿಐ-ಎಂ ಪಾಲಿಟ್‌ಬ್ಯೂರೋ ಸದಸ್ಯ ಸೀತಾರಾಮ ಯಚೂರಿ ಹೇಳಿದ್ದಾರೆ.
ಪತ್ರದಲ್ಲಿ ಅಡಕವಾಗಿರುವ ವಿಚಾರವು, ಭಾರತವು 123 ಒಪ್ಪಂದದಡಿಯಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಲು ಮುಕ್ತವಾಗಿದೆ ಎಂಬುದಾಗಿ ಪ್ರಧಾನಿ ಸಂಸತ್ತಿಗೆ ನೀಡಿರುವ ಭರವಸೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಯಚೂರಿ ಕಿಡಿಕಾರಿದ್ದಾರೆ.
ಇದಕ್ಕಾಗಿಯೇ ನಾವು ಈ ಒಪ್ಪಂದವನ್ನು ಆರಂಭದ ಹಂತದಿಂದಲೂ ವಿರೋಧಿಸುತ್ತಲೇ ಬಂದಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ರಹಸ್ಯ ಪತ್ರದ ಸೋರಿಕೆಯಿಂದಾಗಿ ನಮ್ಮ ನಿಲುವು ಸಮರ್ಥನೆಗೊಂಡಿದೆ ಎಂದು ಅವರು ಹೇಳಿದ್ದಾರೆ.
|