ಭಾರತವು ಅಣುಪರೀಕ್ಷೆ ನಡೆಸಿದಲ್ಲಿ ಭಾರತ-ಅಮೆರಿಕ ಅಣುಒಪ್ಪಂದಕ್ಕೆ ತೆರೆಬೀಳುತ್ತದೆ ಎಂಬ ಅಂಶವನ್ನು ಅಮೆರಿಕ ಬಹಿರಂಗಗೊಳಿಸಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಈ ವಿಚಾರಕ್ಕೆ ಸಂಬಂಧಿಸಿದಂತೆ ಯುಪಿಎ ಸರಕಾರ ರಾಷ್ಟ್ರದ ಜನತೆಯನ್ನು ವಂಚಿಸಿದೆ ಎಂದು ಹೇಳಿದ್ದಾರೆ.
"ನಮಗಿದು ಮೂರು ತಿಂಗಳ ಹಿಂದೆ ತಿಳಿದಿತ್ತು. ಸರಕಾರವು ರಾಷ್ಟ್ರದ ಜನತೆಯನ್ನು ವಂಚಿಸಿದೆ" ಎಂಬುದಾಗಿ ಕಾರಟ್ ಹೇಳಿದ್ದಾರೆ. ಅವರು, ಬುಶ್ ಆಡಳಿತವು ಅಮೆರಿಕ ಕಾಂಗ್ರೆಸ್‌ಗೆ ಬರೆದಿರುವ ಪತ್ರ ಬಹಿರಂಗವಾಗಿರುವ ಕುರಿತು ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಆವರು ಉತ್ತರಿಸುತ್ತಿದ್ದರು. ವಿವಾದಾಸ್ಪದ ಅಣುಒಪ್ಪಂದದ ಅಂಶಗಳನ್ನು ಸಾರ್ವಜನಿಕರಿಂದ ಯುಪಿಎ ಸರಕಾರ ಮರೆಮಾಚುತ್ತಿದೆ ಎಂದು ಸಿಪಿಐ-ಎಂ ಪಾಲಿಟ್‌ಬ್ಯೂರೋ ಸದಸ್ಯೆ ಬೃಂದಾಕಾರಟ್ ದೂರಿದ್ದಾರೆ.
ಇದೀಗ ಒಪ್ಪಂದದ ಕೆಲವು ಭಾಗ ಬಹಿರಂಗಗೊಂಡಿದೆ. ಇನ್ನುಳಿದ ಅಂಶಗಳೂ ಶೀಘ್ರ ಬಹಿರಂಗಗೊಳ್ಳಲಿದೆ ಎಂದು ನುಡಿದ ಬೃಂದಾ, ಸರಕಾರವು ಈ ಎಲ್ಲ ಪ್ರಕ್ರಿಯೆಯಲ್ಲಿ ಅಮೆರಿಕದೊಂದಿಗೆ ಕೈಜೋಡಿಸಿದೆ ಎಂದು ಆಪಾದಿಸಿದರಲ್ಲದೆ, ಒಪ್ಪಂದವನ್ನು ಕಾರ್ಯಗತಗೊಳಿಸಲು ಯಾವುದೇ ಕ್ರಮ ಕೈಗೊಳ್ಳದಿರುವಂತೆ ಒತ್ತಾಯಿಸುವುದಾಗಿ ನುಡಿದರು.
ಇಂಧನ ಪೂರೈಕೆ ಭರವಸೆಗೆ ಅಮೆರಿಕವು ಯಾವುದೇ ಬದ್ಧತೆಯನ್ನು ನೀಡಿಲ್ಲ, ಮನಮೋಹನ್ ಸಿಂಗ್ ಸರಕಾರವು ರಾಷ್ಟ್ರದ ರಕ್ಷಣಾ ಹಿತಾಸಕ್ತಿಯೊಂದಿಗೆ ರಾಜೀಮಾಡಿಕೊಂಡಿರುವ ವಿಚಾರ ಜಗಜ್ಜಾಹೀರಾಗಿದೆ ಎಂದು ಸಿಪಿಐ-ಎಂ ಹೇಳಿದೆ.
ಸಂದಿಗ್ಧತೆಯಲ್ಲಿ ಮುಲಾಯಂ ಬುಶ್ ಆಡಳಿತದ ಪತ್ರ ಬಹಿರಂಗಗೊಂಡಿರುವ ಹಿನ್ನೆಲೆಯಲ್ಲಿ, ಯುಪಿಎಯ ಪ್ರಮುಖ ಅಂಗ ಪಕ್ಷವಾಗಿರುವ ಸಮಾಜವಾದಿ ಪಕ್ಷವು ಬಹಳ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿದೆ.
"ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿಯವರ ನಿಲುವು ಹಾಗೂ ವಿವಾದಿತ ಪತ್ರದ ವಿಷಯದಲ್ಲಿ ಸಾಕಷ್ಟು ವೈರುಧ್ಯಗಳಿವೆ" ಎಂದು ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ತಾನು ಸಂದಿಗ್ಧತೆಯಲ್ಲಿ ಇರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಹೇಳಿದ್ದಾರೆ. ಏತನ್ಮಧ್ಯೆ ಪತ್ರದ ಕುರಿತು ಭಯಭೀತರಾಗಬೇಕಾಗಿಲ್ಲ ಎಂದು ಹೇಳಿರುವ ಕಾಂಗ್ರೆಸ್ ಪತ್ರದಲ್ಲಿ ಹೊಸದೇನೂ ಇಲ್ಲ ಎಂದಿದೆ.
|