ರಾಷ್ಟ್ರದ ಅಣು ಪರೀಕ್ಷೆಯ ಹಕ್ಕನ್ನು ಅಮೆರಿಕಕ್ಕೆ ಒಪ್ಪಿಸಲಾಗಿದೆ ಎಂಬ ಬಿಜೆಪಿಯ ಆರೋಪಗಳನ್ನು ಅಲ್ಲಗಳೆದಿರುವ ಯುಪಿಎ ಸರಕಾರ, 123 ಒಪ್ಪಂದದ ಪ್ರಕಾರ ಭಾರತವು ತನ್ನ ಅಣುಪರೀಕ್ಷೆ ಹಕ್ಕನ್ನು ಕಾಯ್ದಿರಿಸಿದೆ ಎಂದು ಹೇಳಿದೆ.
ಬಿಜೆಪಿಯ ಆರೋಪವು ವಿವೇಚನಾರಹಿತವಾದುದು ಎಂದು ಕಾಂಗ್ರೆಸ್ ವಕ್ತಾರ ಆನಂದ ಶರ್ಮಾ ಹೇಳಿದ್ದಾರೆ. ಬುಶ್ ಆಡಳಿತವು ಅಮೆರಿಕ ಕಾಂಗ್ರೆಸ್‌ಗೆ ಬರೆದಿರುವ ಪತ್ರವು ಬಹಿರಂಗಗೊಂಡಿರುವ ಕಾರಣ ಸರಕಾರ ಈ ಸ್ಪಷ್ಟನೆ ನೀಡುವ ಅನಿವಾರ್ಯತೆಗೆ ಬಿದ್ದಿದೆ.
ಪತ್ರದಲ್ಲಿ, ಭಾರತವು ಅಣುಪರೀಕ್ಷೆ ನಡೆಸಿದಲ್ಲಿ, ಭಾರತಕ್ಕೆ ಅಣುಪೂರೈಕೆ ಮಾಡದು ಎಂಬ ಅಂಶವನ್ನು ಹೇಳಿರುವ ವಿಚಾರ ಬಹಿರಂಗಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ, ಸರಕಾರದ ಮೇಲೆ ದಾಳಿ ನಡೆಸಿದೆ. ಅಲ್ಲದೆ ಸರಕಾರದ ಹೊಸ ಮಿತ್ರ ಸಮಾಜವಾದಿ ಪಕ್ಷವೂ ಸಹ, ಅಣುಒಪ್ಪಂದದ ಹೊಸ ಬೆಳವಣಿಗಳಿಂದಾಗಿ ತಾನು ಸಂದಿಗ್ಧತೆಗೆ ಬಿದ್ದಿರುವುದಾಗಿ ಹೇಳಿದೆ.
ಆದರೆ ಆಗಿರುವ ಹಾನಿಯನ್ನು ಸರಿಪಡಿಸಿಕೊಳ್ಳಲು ತಕ್ಷಣ ಧಾವಿಸಿರುವ ಕಾಂಗ್ರೆಸ್ ಅಣುಒಪ್ಪಂದದಲ್ಲಿ ಹೊಸಬೆಳವಣಿಗಳೇನೂ ಇಲ್ಲ ಎಂದು ಹೇಳಿದ್ದು, ರಾಷ್ಟ್ರ ಅಣುಪರೀಕ್ಷೆಯ ಹಕ್ಕಿಗೆ ಧಕ್ಕೆಯುಂಟಾಗಿಲ್ಲ ಎಂದು ಹೇಳಿದೆ.
ಪ್ರಧಾನಿ ಮನಮೋಹನ್ ಸಿಂಗ್ ರಾಷ್ಟ್ರದ ಹಾದಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಬಿಜೆಪಿ, ಯುಪಿಎ ಸರಕಾರದ ರಾಜೀನಾಮೆಗೆ ಒತ್ತಾಯಿಸಿದೆ.
|