ಸಿಮಿ ಸಂಘಟನೆಯ ಕುರಿತು ಶ್ವೇತಪತ್ರ ಹೊರಡಿಸುವಂತೆ ಬಿಜೆಪಿ ಒತ್ತಾಯಿಸಿರುವ ಬೆನ್ನಲ್ಲೇ, ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್, ಆರ್‌ಎಸ್‌ಎಸ್ ಸೇರಿದಂತೆ ಸಂಘ ಪರಿವಾರದ ಇತರ ಘಟಕಗಳನ್ನು ನಿಷೇಧಿಸಬೇಕೆಂದು ಲೋಕಜನಶಕ್ತಿ ಪಕ್ಷ ಮುಖಂಡ,ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಆಗ್ರಹಿಸಿದ್ದಾರೆ.
ಅಲ್ಲದೇ ಒರಿಸ್ಸಾದಲ್ಲಿ ನಡೆದಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈ ಸಂಘಟನೆಗಳ ಕಾರ್ಯಚಟುವಟಿಕೆಗಳ ಕುರಿತೂ ತನಿಖೆ ನಡೆಸಬೇಕೆಂದು ಒತ್ತಾಯಿಸಿದ ಅವರು, ದೇಶವಿರೋಧಿ ಚಟುವಟಿಕೆ ನಡೆಸುತ್ತಿರುವ ಈ ಸಂಘಟನೆಗಳ ಮೇಲೆ ನಿಷೇಧ ಹೇರಬೇಕೆಂದು ಹೇಳಿದರು.
ಒರಿಸ್ಸಾದಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಡೆದಿರುವ ಹಿಂಸಾಕಾಂಡ ದೇಶದ ಏಕತೆ ಧಕ್ಕೆ ತಂದಿದ್ದಲ್ಲದೆ, ಇದು ಅವಮಾನಕರ ಸಂಗತಿಯಾಗಿದೆ ಎಂದರು.
ಸಂಘಪರಿವಾರವನ್ನು ನಿಷೇಧಿಸುವಂತೆಯೇ,ಸ್ಟೂಡೆಂಟ್ಸ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯನ್ನೂ ನಿಷೇಧಿಸಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು. ಅದರಂತೆ ಆರ್‌ಎಸ್ಎಸ್,ವಿಎಚ್‌ಪಿ,ಬಜರಂಗದಳವನ್ನು ಯಾಕೆ ನಿಷೇಧಿಸಬಾರದು ಎಂದು ಪ್ರಶ್ನಿಸಿದ್ದಾರೆ.
ಆ ನಿಟ್ಟಿನಲ್ಲಿ ಸಿಮಿ ಸಂಘಟನೆ ಸೇರಿದಂತೆ ಸಂಘ ಪರಿವಾರದ ಇತರ ಘಟಕಗಳ ಚಟುವಟಿಕೆಗಳ ಕುರಿತಾಗಿಯೂ ಶ್ವೇತಪತ್ರ ಹೊರಡಿಸಬೇಕೆಂದು ಅವರು ಆಗ್ರಹಿಸಿದರು.
ಈ ಸಂಘಟನೆಗಳ ಮೇಲೆ ನಿಷೇಧ ಹೇರುವುದು ಅಥವಾ ಬಿಡುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ಆದರೆ ಸಂಘಟನೆಗಳ ಕಾರ್ಯವಿಧಾನಗಳ ಬಗ್ಗೆ ಕೂಲಂಕ ಷವಾಗಿ ವರದಿಯನ್ನು ಕಲೆಹಾಕಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದರು.
|