ಪಕ್ಷೇತರರಾಗಿ ಚುನಾವಣೆಗೆ ಸ್ಫರ್ಧಿಸಿ ಸಚಿವರಾಗಿರುವರ ಸಾಮರ್ಥ್ಯದ ಕುರಿತು ತಾನೊಂದು ಪುಸ್ತಕ ಬರೆಯುವುದಾಗಿ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ, ಹಾಲಿ ಉಪಮುಖ್ಯಮಂತ್ರಿ ಮಧುಕೋಡಾ ಹೇಳಿದ್ದಾರೆ.
ಜಾರ್ಖಂಡ್‌ನ ಹಾಲಿ ಮುಖ್ಯಮಂತ್ರಿ ಶಿಬುಸೊರೇನ್‌ಗಾಗಿ ತನ್ನ ಸ್ಥಾನ ದಾನ ಮಾಡಿದ ಕೋಡಾ, ಸ್ವಯಂ ಪಕ್ಷೇತರರಾಗಿದ್ದು, ಮುಖ್ಯಮಂತ್ರಿ ಗುದ್ದುಗೆಯನ್ನು ಏರಿದವರು. ತಾನೊಬ್ಬ ಪಕ್ಷೇತರನಾಗಿದ್ದರೂ, ಇತರ ಪ್ರಮುಖ ಪಕ್ಷಗಳ ಸಹಾಯದಿಂದ ಸುಮಾರು ಎರಡು ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದು ಸಮ್ಮಿಶ್ರಕೂಟ ರಾಜಕೀಯದ ಒತ್ತಡಗಳನ್ನು ನಿಭಾಯಿಸಿಕೊಂಡವನೆಂದು ಅವರು ಹೇಳಿಕೊಂಡಿದ್ದಾರೆ.
ರಾಜಕೀಯ ಅಂಕೆಸಂಖ್ಯೆಗಳ ಲೆಕ್ಕಾಚಾರದಲ್ಲಿ ಪಕ್ಷೇತರರಿಗಿರುವ ಬೆಲೆಯ ಹಿನ್ನೆಲೆಯಲ್ಲಿ ಪಕ್ಷೇತರರು ಆಡಳಿತವನ್ನೇ ಅಪಹರಿಸುತ್ತಾರೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ.
ಸ್ವತಂತ್ರ ಶಾಸಕನೂ ಇತರ ರಾಜಕೀಯ ಪಕ್ಷಗಳ ಶಾಸಕರಂತೆ ಚುನಾಯಿತನಾದವನು ಮತ್ತು ಸಂಸದೀಯ ಪ್ರಜಾಸತ್ತೆಯಲ್ಲಿ ಆತನಿಗೂ ಸಮಾನ ಜವಾಬ್ದಾರಿಗಳಿವೆ ಎಂದು ಕೋಡಾ ಹೇಳಿದ್ದಾರೆ.
ಹಾಗೆ ನೋಡಿದರೆ ಕೋಡಾ ಅವರಿಗೆ ಬರವಣಿಗೆ ಹೊಸದಲ್ಲ. ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಪ್ನೋಂಕಿ ರಹಾ ಪರ್ (ಕನಸಿನ ಹಾದಿಯಲ್ಲಿ) ಎಂಬ ಪುಸ್ತಕ ಬರೆದಿದ್ದಾರೆ.
ತನ್ನ ಮುಂದಿನ ಪುಸ್ತಕದಲ್ಲಿ ಅವರು ರಾಜಕೀಯ ಪಕ್ಷಗಳನ್ನು ನಿರ್ವಹಿಸುವ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಬಿಂಬಿಸಲಿದ್ದಾರೆ ಮತ್ತು ಓರ್ವ ಸ್ವತಂತ್ರ ಅಭ್ಯರ್ಥಿಯಾಗಿದ್ದುಕೊಂಡು ಬಿಕ್ಕಟ್ಟಿನ ಸನ್ನಿವೇಶಗಳನ್ನು ಅವರು ಹೇಗೆ ನಿಭಾಯಿಸಿದರು ಎಂಬ ಕುರಿತು ಹೇಳಲಿದ್ದಾರಂತೆ.
|