ಮಾಲ್ಡೀವ್ಸ್‌ನಲ್ಲಿ ತಮ್ಮ ಪುತ್ರ ಇಶ್ಮೀತ್ ಸಿಂಗ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂಬುದನ್ನು ಒಪ್ಪಿಕೊಳ್ಳಲು ತಯಾರಿಲ್ಲದ ಆತನ ಹೆತ್ತವರು, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಈ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.
ಇಶ್ಮಿತ್ ಅವರ ತಂದೆ ಗುರ್ಪಿಂದರ್ ಸಿಂಗ್ ಮತ್ತು ಅವರ ಅಂಕಲ್ ಚರಣ್ ಕಮಲ್ ಸಿಂಗ್ ಅವರು ದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿಮಾಡಿ ಪ್ರಕರಣ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.
ಪ್ರಧಾನಿಯವರು ಈ ಬೇಡಿಕೆಯ ಕುರಿತು ಗಮನ ಹರಿಸುವುದಾಗಿ ಭರವಸೆ ನೀಡಿದರೂ, ಇನ್ನೊಂದು ರಾಷ್ಟ್ರವು ಒಳಗೊಂಡಿರುವ ಪ್ರಕರಣದ ಸಿಬಿಐ ತನಿಖೆಗೆ ಹಲವು ಪ್ರಕ್ರಿಯೆಗಳು ಮತ್ತು ಕಾನೂನುಗಳನ್ನು ಅನುಸರಿಸಬೇಕಾಗುತ್ತದೆ ಎಂದು ಹೇಳಿದ್ದಾರೆನ್ನಲಾಗಿದೆ.
ಉದಯೋನ್ಮುಖ ಗಾಯಕ ಸಾವನ್ನಪ್ಪಿರುವ ಸನ್ನಿವೇಶಗಳನ್ನು ಗಮನಿಸಿದರೆ, ಇದರ ಕುರಿತು ಸಿಬಿಐ ತನಿಖೆ ಅವಶ್ಯಕವಾಗಿದೆ ಎಂದು ಚರಣ್ ಕಮಲ್ ಸಿಂಗ್ ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯು, ಇಶ್ಮಿತ್ ಸಾವು ನೀರಿನಲ್ಲಿ ಮುಳುಗಿ ಸಂಭವಿಸಿದೆ ಎಂದು ಹೇಳಿದ್ದರೂ, ಯಾರಾದರೂ ಆತನನ್ನು ಬಲವಂತವಾಗಿ ನೀರಿಗೆ ತಳ್ಳಿದ್ದಾರೆಯೇ ಎಂಬ ಕುರಿತೂ ತನಿಖೆಯಾಗಬೇಕು ಎಂದು ಒತ್ತಾಯಿಸಿರುವ ಅವರು, ಆತನ ಹಣೆಯ ಎಡಭಾಗದಲ್ಲಿ ಆಳವಾದ ಗಾಯ ಮತ್ತು ರಕ್ತ ಹೆಪ್ಪುಕಟ್ಟಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದೂ ಹೇಳಿದ್ದಾರೆ.
"ಇಶ್ಮಿತ್ ತಂದೆ ಮತ್ತು ಇನ್ನೋರ್ವ ಸಂಬಂಧಿಯೊಂದಿಗೆ ತಾವು ಮೂರು ದಿನಗಳ ಹಿಂದೆ ಮಾಲ್ಡೀವ್ಸ್‌ಗೆ ತೆರಳಿದ್ದು, ಇಶ್ಮಿತ್ ತಂಗಿದ್ದ ರೆಸಾರ್ಟಿಗೆ ಭೇಟಿ ನೀಡಿದ್ದೇವೆ. ಇಶ್ಮಿತ್ ಸಾವನ್ನಪ್ಪಿರುವ ಈಜುಕೊಳ 92 ಇಂಚುಗಳ ಆಳಹೊಂದಿದ್ದು, ಆತ ಗಾಯಗೊಳ್ಳುವಂತಹುದೇನೂ ಅಲ್ಲಿ ಇರಲಿಲ್ಲ" ಎಂದು ಚರಣ್ ಹೇಳಿದ್ದಾರೆ.
ವಾಯ್ಸ್ ಆಫ್ ಇಂಡಿಯಾ ಸ್ಫರ್ಧೆಯ ವಿಜೇತ 19ರ ಹರೆಯದ ಇಶ್ಮಿತ್ ಜುಲೈ ತಿಂಗಳಲ್ಲಿ ಮಾಲ್ಡೀವ್ಸ್ ಪ್ರವಾಸ ತೆರಳಿದ್ದ ವೇಳೆ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು.
|