ಕೋಲ್ಕತಾ ಹೈ ಕೋರ್ಟಿನ ನ್ಯಾಯಾಧೀಶ ಸೌಮಿತ್ರ ಸೇನ್ ಅವರಿಗೆ ವಾಗ್ದಂಡನೆ ವಿಧಿಸಲು ಕೇಂದ್ರ ಸರಕಾರ ಸೋಮವಾರ ಅಂಗೀಕಾರ ನೀಡಿದೆ.
ಸೇನ್ ಅವರು 2003ರಲ್ಲಿ ಹೈಕೋರ್ಟ್ ಸೇರುವುದಕ್ಕಿಂತ ಹಿಂದೆ ತೋರಿರುವ ದುರ್ನಡತೆಗಾಗಿ ವಾಗ್ದಂಡನೆ ವಿಧಿಸಲಾಗುತ್ತಿದೆ. ಈ ವಿಚಾರವನ್ನು ಸ್ಪಷ್ಟಪಡಿಸಿರುವ ಕೇಂದ್ರ ಕಾನೂನು ಮತ್ತು ಸುವ್ಯವಸ್ಥೆ ಸಚಿವ ಹನ್ಸರಾಜ್ ಭಾರದ್ವಾಜ್ ಅವರು, ಸೇನ್ ವಾಗ್ದಂಡನೆ ವಿಚಾರವನ್ನು ಸಂಸತ್ತಿನ ಮುಂದಿಡಲಾಗುವುದು ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಾಧೀಶ ಕೆ.ಜಿ.ಬಾಲಕೃಷ್ಣನ್ ಅವರು ಪ್ರಧಾನಿಯವರ ಮಧ್ಯಪ್ರವೇಶವನ್ನು ಕೋರಿದ್ದು, ವಾಗ್ದಂಡನೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ವಿನಂತಿಸಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರೊಬ್ಬರ ಪದಚ್ಯುತಿಗೆ ಹಾದಿಯುಂಟುಮಾಡುವ ವಾಗ್ದಂಡನೆ ಪ್ರಕ್ರಿಯೆಗೆ ಮುಖ್ಯನ್ಯಾಯಮೂರ್ತಿಗಳು ಶಿಫಾರಸ್ಸು ಮಾಡುತ್ತಿರುವುದು ಭಾರತದ ನ್ಯಾಯಾಂಗ ಇತಿಹಾಸದಲ್ಲಿಯೇ ಇದು ಎರಡನೆ ಬಾರಿಯಾಗಿದೆ.
ಇಟ್ಟಿಗೆ ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಸೈಲ್ ಮತ್ತು ಭಾರತದ ಹಡಗು ನಿಗಮದ ನಡುವಿನ ದಾವೆಗೆ ಸಂಬಂಧಿಸಿದಂತೆ, 1993ರಲ್ಲಿ ಸೇನ್ ಅವರನ್ನು ಕೋರ್ಟ್ ರಿಸೀವರ್ ಆಗಿ ನೇಮಿಸಲಾಗಿದ್ದು, ಈ ಸಂದರ್ಭದಲ್ಲಿ ಅವರು 32 ಲಕ್ಷ ರೂಪಾಯಿಯ ದುರ್ವಿನಿಯೋಗ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ.
ಮೂರು ನ್ಯಾಯಾಧೀಶರ ಸದಸ್ಯತ್ವದ ತನಿಖಾ ಸಮಿತಿಯು ಸೇನ್ ಅವರು ತಪ್ಪಿತಸ್ಥ ಎಂಬುದಾಗಿ ಹೇಳಿರುವ ಹಿನ್ನೆಲೆಯಲ್ಲಿ ವಾಗ್ದಂಡನೆ ವಿಧಿಸಲಾಗುತ್ತಿದೆ.
ಈ ಹಣವನ್ನು ಅವರು ಯಾವುದಾದರೂ ಬ್ಯಾಂಕಿನಲ್ಲಿ ಸುರಕ್ಷಿತವಾಗಿರಿಸುವುದರ ಬದಲು ತಮ್ಮ ವೈಯಕ್ತಿಕ ಖಾತೆಯಲ್ಲಿ ಇರಿಸಿದ್ದರು. ಆವರು ಹೈಕೋರ್ಟ್ ನ್ಯಾಯಾಧೀಶರಾದ ಬಳಿಕವು ಹಣವನ್ನು ತನ್ನಲ್ಲಿಯೇ ಇರಿಸಿಕೊಂಡಿದ್ದು, 2006ರಲ್ಲಿ ಹೈಕೋರ್ಟ್ ಆದೇಶದ ಬಳಿಕವಷ್ಟೆ ಹಿಂತಿರುಗಿಸಿದ್ದರು.
|