ಡಿಎಂಕೆ ಸಂಸ್ಥಾಪಕ ಅಣ್ಣಾದೊರೈ ಅವರ ನೂರನೆಯ ಜನ್ಮದಿನಾಚರಣೆಯಾದ ಸೆಪ್ಟೆಂಬರ್ 15ರಂದು ಕೆಜಿಯೊಂದರ ಒಂದು ರೂಪಾಯಿ ಅಕ್ಕಿ ಯೋಜನೆಯನ್ನು ಮುಖ್ಯಮಂತ್ರಿ ಕರುಣಾನಿಧಿ ಅನಾವರಣಗೊಳಿಸಲಿದ್ದಾರೆ.
ಆರ್.ಕೆ.ನಗರ್ ವಿಧಾನಸಭಾ ಕ್ಷೇತ್ರದಲ್ಲಿ ಈ ಯೋಜನೆಯನ್ನು ಅವರು ಉದ್ಘಾಟಿಸಲಿದ್ದಾರೆ. 1967ರಲ್ಲಿ ಈ ಕ್ಷೇತ್ರದಲ್ಲಿ ಅಣ್ಣಾ ಅವರು ನೀಡಿದ್ದ ಭರವಸೆಯನ್ನು ಅಂದು ಕೆಲವು ಪ್ರಾಯೋಗಿಕ ಸಮಸ್ಯೆಗಳಿಂದಾಗಿ ಪೂರೈಸಲಾಗದ ಕಾರಣ, ಇದೀಗ ಅದೇ ಸ್ಥಳದಲ್ಲಿ ಅವರ ಭರವಸೆ ಈಡೇರಿಸಲು ಕರುಣಾನಿಧಿ ಮುಂದಾಗಿದ್ದಾರೆ.
ಸೆಪ್ಟೆಂಬರ್ 16ರಂದು ಈ ಯೋಜನೆಯನ್ನು ನಗರದ ಇತರ 13 ಕ್ಷೇತ್ರಗಳು ಮತ್ತು ತಮಿಳ್ನಾಡು ರಾಜ್ಯದ ಇತರ ಭಾಗಗಳಲ್ಲಿ ರಾಜ್ಯ ಮತ್ತು ಕೇಂದ್ರ ಸಚಿವರು ಅನಾವರಣಗೊಳಿಸಲಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಹಿರಿಯ ಸಚಿವರುಗಳಾದ ಕೆ.ಅನ್ಬಜಗನ್, ಆರ್ಕಾಟ್ ವೀರಸ್ವಾಮಿ ಮತ್ತು ಎಂ.ಕೆ.ಸ್ಟಾಲಿನ್ ಅವರುಗಳು ಅನುಕ್ರಮವಾಗಿ ಹಾರ್ಬರ್, ಅಣ್ಣಾನಗರ್ ಮತ್ತು ಸಾವಿರ ದೀಪ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
ಈಗಾಗಲೇ ಕಿಲೋ ಒಂದರ ಎರಡು ರೂಪಾಯಿಯಂತೆ ಅಕ್ಕಿ ನೀಡುತ್ತಿರುವ ಸರಕಾರವು ಒಂದು ರೂಪಾಯಿಗೆ ಅಕ್ಕಿ ನೀಡಲು ನಿರ್ಧರಿಸಿದೆ. ಆಡಳಿತಾರೂಢ ಡಿಎಂಕೆಯ ಜಿಲ್ಲಾ ಕಾರ್ಯದರ್ಶಿಗಳು ಈ ಕುರಿತು ಕಳೆದ ವಾರ ಗೊತ್ತುವಳಿ ರೂಪಿಸಿರುವ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೊಸ ಯೋಜನೆಯಿಂದಾಗಿ ಒಟ್ಟು 1.86 ಕೋಟಿ ಪಡಿತರ ಚೀಟಿದಾರರು ಪ್ರಯೋಜನ ಪಡೆಯಲಿದ್ದಾರೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ಹೆಚ್ಚುವರಿ 400 ಕೋಟಿ ರೂಪಾಯಿ ಹೊರೆಬೀಳಲಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪೂರೈಕೆಯಾಗುತ್ತಿರುವ ಅಕ್ಕಿ ಸೇರಿದಂತೆ ಆಹಾರ ವಸ್ತುಗಳ ಸರಬರಾಜಿಗಾಗಿ ಸರಕಾರವು ಇದೀಗಾಗಲೇ 1950 ಕೋಟಿ ರೂಪಾಯಿ ಭರಿಸುತ್ತಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವಂತೆ, ಡಿಎಂಕೆ ಅಧಿಕಾರಕ್ಕೆ ಬಂದ ಬಳಿಕ ಪಡಿತರ ಚೀಟಿ ಮೂಲಕ ವಿತರಣೆ ಮಾಡುವ ಅಕ್ಕಿಯ ಬೆಲೆಯನ್ನು ಮೂರುವರೆ ರೂಪಾಯಿಯಿಂದ ಎರಡು ರೂಪಾಯಿಗೆ ಇಳಿಸಿತ್ತು. ಇದೀಗ ಒಂದು ರೂಪಾಯಿಗಿಳಿಸುತ್ತಿದೆ. ರಾಜ್ಯದ ಅರ್ಹ ಕಾರ್ಡುದಾರರಿಗೆ ತಿಂಗಳೊಂದರ 20 ಕೆ.ಜಿ ಅಕ್ಕಿ ನೀಡಲಾಗುತ್ತಿದೆ.
|