ಬಚ್ಚನ್ ಕುಟುಂಬ ವಿರುದ್ಧದ ತನ್ನ ಆಕ್ರೋಶವನ್ನು ಮುಂದುವರಿಸಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ನಾಯಕ ರಾಜ್ ಠಾಕ್ರೆ, ಮರಾಠಿ-ವಿರೋಧಿ ಹೇಳಿಕೆ ನೀಡಿದ್ದರೆನ್ನಲಾದ ಜಯಾ ಬಚ್ಚನ್ ಕ್ಷಮೆ ಯಾಚಿಸುವವರೆಗೂ, ಬಚ್ಚನ್ ಕುಟುಂಬ ಸದಸ್ಯರಿರುವ ಯಾವುದೇ ಚಿತ್ರಗಳನ್ನು ಮಹಾರಾಷ್ಟ್ರದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಬಚ್ಚನ್ ಕುಟುಂಬ ಸದಸ್ಯರು ಜಾಹೀರಾತು ಮಾಡುವ ಎಲ್ಲಾ ಉತ್ಪನ್ನಗಳನ್ನು ತಿರಸ್ಕರಿಸುವಂತೆಯೂ ಎಂಎನ್ಎಸ್ ಮುಖಂಡ ರಾಜ್ ಠಾಕ್ರೆ ಮರಾಠಿಗರಿಗೆ ಕರೆ ನೀಡಿದ್ದು, ಬಚ್ಚನ್‌ಗಳು ಮರಾಠಿಗರ ಬಗ್ಗೆ "ಮನಸ್ಸಿನಲ್ಲಿ ವಿಷ ತುಂಬಿಕೊಂಡಿದ್ದಾರೆ" ಎಂದು ಆರೋಪಿಸಿದ್ದಾರೆ.
ಈ ಹಿಂದೆ, ರಾಜ್ ಠಾಕ್ರೆ ಎಂದರೆ ಯಾರೆಂಬುದೇ ತಿಳಿದಿರಲಿಲ್ಲ ಎಂದು ಹೇಳುವ ಮೂಲಕ, ರಾಜ್ಯಸಭಾ ಸದಸ್ಯೆಯೂ ಆಗಿರುವ ಜಯಾ ಬಚ್ಚನ್, ರಾಜ್ ಆಕ್ರೋಶದ ಬೆಂಕಿಗೆ ತುಪ್ಪ ಎರೆದಿದ್ದರು.
ಜಯಾ ಅವರು ಚಲನಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ, ನಾವು ಉತ್ತರಪ್ರದೇಶದವರಾಗಿದ್ದು, ನಾವು ಹಿಂದಿಯನ್ನೇ ಮಾತನಾಡಬೇಕು. ಮಹಾರಾಷ್ಟ್ರೀಯರು ಹಿಂದಿ ಮಾತನಾಡುವುದಕ್ಕಾಗಿ ನಮ್ಮನ್ನು ಕ್ಷಮಿಸಬೇಕು ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಯನ್ನು ಬಹುತೇಕ ರಾಜ್ ಠಾಕ್ರೆಯನ್ನು ಉಲ್ಲೇಖಿಸಿಯೇ ನೀಡಲಾಗಿದೆ ಎಂದು ಬಲವಾಗಿ ಶಂಕಿಸಲಾಗಿದೆ.
ಇದೀಗ "ರಾಜ್ ಠಾಕ್ರೆ ಯಾರು ಎಂಬುದು ತನಗೆ ಗೊತ್ತಿಲ್ಲ ಎಂದು ಆಕೆ ಹೇಳಿದ್ದರು. ಈಗ, ಅವರದನ್ನು ತಿಳಿಯಲಿದ್ದಾರೆ" ಎಂದು ರಾಜ್ ಹೇಳಿದ್ದಾರೆ. |