ಒರಿಸ್ಸಾದಲ್ಲಿ ಇತ್ತೀಚೆಗೆ ಸಂಭವಿಸಿದ ಕೋಮುದಳ್ಳುರಿಗೆ ಕಾರಣವಾದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಹಾಗೂ ಇತರ ನಾಲ್ವರ ಕೊಲೆ ಕೃತ್ಯ ತನ್ನದು ಎಂಬುದಾಗಿ ಸಿಪಿಐ ಮಾವೋವಾದಿಗಳು ಮಂಗಳವಾರ ಹೇಳಿದ್ದಾರೆಂದು ವರದಿಯಾಗಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ನಿಷೇಧಿತ ನಕ್ಸಲ್ ಸಂಘಟನೆಯು ಹತ್ಯೆಗೀಡಾಗಿರುವ ವಿಹಿಂಪ ನಾಯಕ ಈ ಪ್ರದೇಶದಲ್ಲಿ ಕೋಮುರಾಜಕಾರಣ ಮಾಡುತ್ತಿದ್ದರು ಎಂದು ದೂರಿದ್ದು, ಈ ಕಾರಣಕ್ಕಾಗಿಯೇ ಅವರನ್ನು ಕೊಂದು ಹಾಕಿರುವುದಾಗಿ ಹೇಳಿದೆ.
ಸ್ವಾಮಿಜಿಯ ದುರದೃಷ್ಟಕರ ಸಾವಿನ ಬಳಿಕ ಕಂಧಮಲ್ ಜಿಲ್ಲೆಯು ಸಾಕಷ್ಟು ಹಿಂಸಾಚಾರ ಕಂಡಿದ್ದು, ಸಾವು ನೋವುಗಳು ಸಂಭವಿಸಿದ್ದವು. ಹಿಂದೂ ಸಂಘಟನೆಗಳು ಇದು ಕ್ರಿಶ್ಚಿಯನ್ನರ ಕೃತ್ಯ ಎಂದು ಆರೋಪಿಸಿದ್ದವು.
ಅದಾಗ್ಯೂ, ನಕ್ಸಲರು ಲಕ್ಷ್ಮಣಾನಂದ ಸ್ವಾಮೀಜಿಯ ಸಾವಿನ ಜವಾಬ್ದಾರಿ ಹೊತ್ತುಕೊಂಡಿರುವ ಕುರಿತು ಸರಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.
ಮತಾಂತರದ ವಿರುದ್ಧ ಕಾರ್ಯವೆಸಗುತ್ತಿದ್ದ 85ರ ಹರೆಯದ ಸ್ವಾಮೀಜಿ, ಬುಡಕಟ್ಟು ಪ್ರದೇಶದಲ್ಲಿ ಕಾರ್ಯವೆಸಗುತ್ತಿದ್ದು, ಅಲ್ಲೇ ಆಶ್ರಮ ಹೊಂದಿದ್ದರು. ಅವರನ್ನು ತುಮುಡಿಬಂದ್ ಕ್ಷೇತ್ರದ ಜಲೆಸ್‌ಪೇಟದಲ್ಲಿರುವ ಬಾಲಕಿಯರ ಆಶ್ರಮದಲ್ಲಿ ಅಪರಿಚಿತರು ಇತರ ನಾಲ್ವರೊಂದಿಗೆ ಗುಂಡಿಟ್ಟುಕೊಂದಿದ್ದರು.
ಝಡ್ ಪ್ಲಸ್ ಭದ್ರತೆಯ ಕೋರಿಕೆಯನ್ನು ನಿರಾಕರಿಸುವ ಮೂಲಕ ಸ್ವಾಮೀಜಿಯನ್ನು ರಕ್ಷಿಸಲು ಪೊಲೀಸರು ಮತ್ತು ರಾಜ್ಯಸರಕಾರ ವಿಫಲವಾಗಿದೆ ಎಂದು ಬಿಜೆಪಿ ನಾಯಕತ್ವ ದೂರಿತ್ತು.
|