ಭಾರತದ ಶ್ರೇಷ್ಠ ಪಿಟೀಲು ವಾದಕರಲ್ಲಿ ಒಬ್ಬರಾಗಿದ್ದ, ಪದ್ಮಶ್ರೀ ಪ್ರಶಸ್ತಿ ವಿಜೇತ ಕುನ್ನಕುಡಿ ವೈದ್ಯನಾಥನ್ ಅವರು ನಗರದ ಸಿಟಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಸಾವನ್ನಪ್ಪಿದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ರಾಮಸ್ವಾಮಿ ಶಾಸ್ತ್ರಿ ಹಾಗೂ ಮೀನಾಕ್ಷಿ ದಂಪತಿಗಳಿಗೆ 1935 ರಲ್ಲಿ ಜನಿಸಿದ್ದ ಇವರಿಗೆ 12 ರ ಪ್ರಾಯದಲ್ಲೇ ಸಂಗೀತ ದಿಗ್ಗಜರಾದ ಅರಿಯಕುಡಿ, ಶೆಮ್ಮಂಗುಡಿ ಹಾಗೂ ಮಹಾರಾಜಪುರಂ ಅವರ ಸಾಂಗತ್ಯ ಲಭಿಸಿತ್ತು.
ಸಂಸ್ಕೃತ ವಿದ್ವಾಂಸರಾಗಿದ್ದ ವೈದ್ಯನಾಥನ್ ಅವರ ತಂದೆ, ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಣತರಾಗಿದ್ದರು. ತಂದೆಯಿಂದ ಸಂಗೀತದ ಪ್ರಾಥಮಿಕ ಪಾಠ ಆರಂಭಿಸಿದ ವೈದ್ಯನಾಥನ್ ಸಂಗೀತದ ಜೊತೆಗೆ ವೇದಾಧ್ಯಯನವನ್ನೂ ಮಾಡಿದ್ದಾರೆ.
ಸೇಲಂನ ಮಾಡರ್ನ್ ಥಿಯೇಟರ್ಸ್‌ನಲ್ಲಿ ಚಲನಚಿತ್ರಗಳಿಗೆ ವೈದ್ಯನಾಥನ್ ವಾದ್ಯ ಗೋಷ್ಠಿ ನಡೆಸುತ್ತಿದ್ದರು. ಭಕ್ತಿ ಸಂಗೀತಕ್ಕೆ ಮೆರಗು ನೀಡಿದ ಅವರು ಹೆಚ್‌ಎಂವಿ ಸಂಸ್ಥೆಗಾಗಿ ಫ್ರೀಲಾನ್ಸ್ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ತಮಿಳಿನ ಅನ್ನಿಯನ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿಯೂ ಇದ್ದರು.
ಪದ್ಮಶ್ರೀ ,ಸಂಗೀತ ಮಾಮಣಿ, ರಾಮೋತ್ಸವ ಸೇವಾಮಂಡಲಿ ಪ್ರಶಸ್ತಿ ಸೇರಿದಂತೆ ಸುಮಾರು 200 ಕ್ಕೂ ಅಧಿಕ ಗೌರವ ಪ್ರಶಸ್ತಿಗಳನ್ನು ಮೃತ ಕುನ್ನಕುಡಿ ವೈದ್ಯನಾಥನ್ ಪಡೆದಿದ್ದರು.
|