ಭಾರತ-ಅಮೆರಿಕ ಅಣುಒಪ್ಪಂದಲ್ಲಿನ ನಿರ್ಣಾಯಕ ಮಾಹಿತಿಗಳನ್ನು ಮರೆಮಾಚಲಾಗಿದೆ ಎಂದು ಆರೋಪಿಸಿರುವ ಪ್ರಮುಖ ವಿರೋಧ ಪಕ್ಷಗಳು ತಕ್ಷಣವೇ ಸಂಸತ್ ಅಧಿವೇಶನ ಕರೆಯಲು ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲರನ್ನು ಒತ್ತಾಯಿಸಿವೆ.
ಎಡಪಕ್ಷಗಳು, ಬಹುಜನ ಸಮಾಜವಾದಿ ಪಕ್ಷ, ಟಿಡಿಪಿ ಹಾಗೂ ತೃತೀಯ ರಂಗದ ಸ್ಥಾಪನೆಗೆ ಪ್ರಯತ್ನಿಸುತ್ತಿರುವ ಪಕ್ಷಗಳು ಸರಕಾರವು ಮುಂಗಾರು ಅಧಿವೇಶನ ಕರೆದು, ವ್ಯವಸ್ಥೆಯ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಚಿತ ಪಡಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿವೆ.
ಸಂಸತ್ ವ್ಯವಸ್ಥೆಯನ್ನು ಸರಕಾರ ಬುಡಮೇಲು ಮಾಡುತ್ತಿದೆ ಎಂದು ಆರೋಪಿಸಿರುವ ಪಕ್ಷಗಳು ರಾಷ್ಟ್ರವು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಶೀಘ್ರವೇ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿವೆ.
ಈ ಮೇಲಿನ ಪಕ್ಷಗಳು ಹಾಗೂ ಜೆಡಿಎಸ್ ಮಂಗಳವಾರ ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು.
ರಾಷ್ಟ್ರಾಧ್ಯಕ್ಷರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಐ(ಎಂ) ನಾಯಕ ಸೀತಾರಾಮ ಯಚೂರಿ, ಬಿಎಸ್ಪಿ ನಾಯಕ ಸತೀಶ್ ಮಿಶ್ರಾ, ಟಿಡಿಪಿ ನಾಯಕ ಯೆರ್ರಾ ನಾಯ್ಡು, ಸಿಪಿಐ ನಾಯಕ ಗುರುದಾಸ್ ಗುಪ್ತಾ ಅವರುಗಳು, ರಾಷ್ಟ್ರಪತಿಯವರು ತಮ್ಮ ಸಾಂವಿಧಾನಿಕ ಹಕ್ಕನ್ನು ಪ್ರಯೋಗಿಸುವ ಮೂಲಕ ಮುಂಗಾರು ಅಧಿವೇಶನ ಕರೆಯುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಬೆಲೆ ಏರಿಕೆ, ಜಮ್ಮು ಕಾಶ್ಮೀರ ಪರಿಸ್ಥಿತಿ, ಕೋಸಿ ವಿಕೋಪ, ರೈತರ ಆತ್ಮಹತ್ಯೆಗಳಂತಹ ಸಮಸ್ಯೆಗಳು ರಾಷ್ಟ್ರವನ್ನು ಕಾಡುತ್ತಿದ್ದು, ಇವುಗಳಿಗೆ ಯಾರು ನಿಜವಾಗಿಯೂ ಜವಾಬ್ದಾರರು ಎಂಬುದಾಗಿ ಯಾರಿಗೂ ತಿಳಿದಿಲ್ಲ ಎಂದು ಹೇಳಿರುವ ವಿಪಕ್ಷಗಳು ಈ ಕುರಿತು ಸಂಸತ್ತಿನಲ್ಲಿ ತಕ್ಷಣ ಚರ್ಚಿಸುವ ಮೂಲಕ ಜನತಾ ಪ್ರತಿನಿಧಿಗಳು ಅಗತ್ಯ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಧಿವೇಶನವನ್ನು ವಿಳಂಬಿಸುವ ಮೂಲಕ ಸರಕಾರವು ಬುಶ್ ಆಡಳಿತೆಯ ಕಾರ್ಯಸೂಚಿಯನ್ನು ಅನುಸರಿಸುತ್ತದೆ ಎಂದು ಖಾರವಾಗಿ ನುಡಿದ ಟಿಡಿಪಿ ಪ್ರಧಾದ ಕಾರ್ಯದರ್ಶಿ ಯೆರ್ರ ನಾಯ್ಡು, ಸಂಸತ್ತಿನ ದಿನಚರಿಯನ್ನು ಬುಶ್ ಆಡಳಿತ ನಿರ್ಧರಿಸುತ್ತದೆ ಎಂದು ಟೀಕಿಸಿದರು.
|