ಅಕ್ಟೋಬರ್ ಎರಡರಿಂದ ಸಾರ್ವಜನಿಕ ಕ್ಷೇತ್ರಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ ಎಂದು ಸರಕಾರವು ಮಂಗಳವಾರ ಘೋಷಿಸಿದೆ.
ಹೋಟೇಲ್, ರೆಸ್ಟೋರೆಂಟ್ ಮತ್ತು ಕಚೇರಿಗಳಲ್ಲೂ ಈ ನಿಷೇಧವು ಅನ್ವಯಿಸುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಅಂಬುಮಣಿ ರಾಮದಾಸ್ ಹೇಳಿದ್ದಾರೆ.
ಒಂದು ವೇಳೆ ಯಾರಾದರೂ ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡುವುದು ಕಂಡುಬಂದಲ್ಲಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾಯಿದೆಯಡಿಯಲ್ಲಿ ಅಂತಹ ವ್ಯಕ್ತಿಗಳಿಗೆ 200 ರೂ. ದಂಡ ವಿಧಿಸಲಾಗುವುದು ಎಂದು ಸರಕಾರಿ ಪ್ರಕಟಣೆಗಳು ತಿಳಿಸಿವೆ.
ಪ್ರಾರಂಭದಲ್ಲಿ ದಂಡದ ಮೊತ್ತವು ಕೇವಲ 200 ರೂಗಳಾಗಿದ್ದು, ಭವಿಷ್ಯದಲ್ಲಿ ಕಾಯಿದೆಯನ್ನು ತಿದ್ದುಪಡಿ ಮಾಡಿದ ನಂತರ ಈ ಮೊತ್ತವು 1,000 ರೂ.ಗಳಿಗೆ ಏರಲಿದೆ. ಅಲ್ಲದೆ, ಕಾಯಿದೆ ತಿದ್ದುಪಡಿಯ ಬಳಿಕ ಕಚೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಧೂಮಪಾನ ಮಾಡುವವರ ಮೇಲೂ ದಂಡ ವಿಧಿಸಲಾಗುವುದು ಎಂದು ರಾಮದಾಸ್ ಸೂಚಿಸಿದ್ದಾರೆ.
ಇದರ ಹೊರತಾಗಿ, ಡಿಸೆಂಬರ್ ಒಂದರಿಂದ ಎಲ್ಲಾ ತಂಬಾಕು ಉತ್ಪನ್ನಗಳ ಮೇಲೆ ಚಿತ್ರಸಹಿತ ಎಚ್ಚರಿಕೆ ನೀಡುವುದು ಕಡ್ಡಾಯ ಎಂಬುದಾಗಿ ಸರಕಾರವು ಅಧಿಸೂಚನೆಯನ್ನು ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.
|