ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರನ್ನು ವಿಧಾನಸಭೆಯಿಂದ ಮುಂದಿನ ಮೂರರಿಂದ ಐದು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಈ ಶಿಕ್ಷೆ ವಿಧಿಸಲ್ಪಟ್ಟಿದ್ದು ತನ್ನ ಶಾಸಕ ಸ್ಥಾನ ತೊರೆಯುವಂತೆ ಅವರಿಗೆ ಹೇಳಲಾಗುವುದು.
ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ತನಿಖೆ ನಡೆಸುವಂತೆ ತನಿಖಾ ಇಲಾಖೆಗೆ ಸೂಚಿಸಲಾಗಿದೆ.
ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಮರೀಂದರ್ ಸಿಂಗ್, ತಾನು ಬಂಧನ ಭೀತಿ ಹೊಂದಿದ್ದರೂ, ನಿರೀಕ್ಷಣಾ ಜಾಮೀನು ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಅಮರೀಂದರ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ 32.10 ಎಕರೆ ಭೂ ಹಗರಣ ನಡೆದಿರುವ ಹಿನ್ನೆಲೆಯಲ್ಲಿ ಅವರು ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿದ್ದು, ಇದರ ತನಿಖೆಗಾಗಿ ಪಂಜಾಬ್ ವಿಧಾನಸಭೆಯು ವಿಶೇಷ ಸಮಿತಿಯೊಂದನ್ನು ನೇಮಿಸಿದೆ.
ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಾನು ಕಿಸೆಯಲ್ಲೇ ಇಟ್ಟುಕೊಂಡಿದ್ದರೂ, ತಾನದನ್ನು ಬಳಸುವುದಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ತನ್ನ ವಿರುದ್ಧ ಅಕಾಲಿದಳ-ಬಿಜೆಪಿ ಸರಕಾರವು ಯಾವುದೇ ಕ್ರಮ ಕೈಗೊಳ್ಳಬಹುದಾಗಿದೆ. ಆದರೆ ತನ್ನನ್ನು ಅನರ್ಹಗೊಳಿಸಲು ಪ್ರಯತ್ನಿಸುವ ಪ್ರತಿ ಹೆಜ್ಜೆಯನ್ನು ಪ್ರಶ್ನಿಸಿದೆ ಬಿಡುವುದಿಲ್ಲ ಎಂದು ಅಮರೀಂದರ್ ಪ್ರತಿಕ್ರಿಯಿಸಿದ್ದಾರೆ.
ಪಕ್ಷದೊಳಗಿನ ಸಿಂಗ್ ಅವರ ವೈರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ರಾಜೀಂದರ್ ಭಟ್ಟಾಲ್ ಅವರು ಆಪಾದನೆಗಳನ್ನು ತೊಡೆದು ಪರಿಶುದ್ಧರಾಗಿ ಬರುವಂತೆ ಹೇಳಿದ್ದಾರೆ. ಪಕ್ಷವು ಸಿಂಗ್ ಪರವಹಿಸುವುದಾದರೂ, ಆರೋಪದ ಕುರಿತು ಅವರು ವಿವರಣೆ ನೀಡಬೇಕು ಮತ್ತು ವಾಸ್ತವಾಂಶವನ್ನು ಹೊರಗೆಡವಬೇಕು ಎಂದಿದ್ದಾರೆ.
|