ಕಾಶ್ಮೀರ ಕಿಸ್ತವಾರ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಉಗ್ರಗಾಮಿ ಸಂಘಟನೆ ಮತ್ತು ರಕ್ಷಣಾ ಪಡೆಗಳ ನಡುವೆ ಸಂಭವಿಸಿದ ಗುಂಡಿನ ಚಕಮಕಿಯಲ್ಲಿ 'ಹುಜಿ' (ಹರ್ಕತುಲ್ ಜಿಹಾದ್ ಎ ಇಸ್ಲಾಮಿ) ಸಂಘಟನೆಯ ಮೂರು ಮಂದಿ ಉಗ್ರರು ಬಲಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಚಿಗಾಮ್ ಪ್ರದೇಶದಲ್ಲಿ 11ನೇ ರಾಷ್ಟ್ರೀಯ ರೈಫಲ್ಸ್ ಪಡೆ ತೀವ್ರ ಶೋಧಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಉಗ್ರಗಾಮಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂರು ಮಂದಿ ಉಗ್ರರು ಸಾವನ್ನಪ್ಪಿದ್ದು, ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವುದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಹುಜಿಯ ಸ್ವಯಂಘೋಷಿತ ಕಮಾಂಡರ್ ಅಲ್ ಮನ್ಸೂರ್ ಮತ್ತು ಸ್ಥಳೀಯ ಉಗ್ರ ಅಬು ಚೇಚೆ ಸೇರಿದಂತೆ ಮೂರು ಮಂದಿ ಗುಂಡಿಗೆ ಬಲಿಯಾಗಿರುವುದಾಗಿ ಆರ್ಮಿ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಎಸ್.ಜಿ.ಗೋಸ್ವಾಮಿ ತಿಳಿಸಿದ್ದಾರೆ.
ಅಲ್ಲದೇ ಆ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದ್ದು, ಮತ್ತಷ್ಟು ಶಂಕಿತ ಉಗ್ರಗಾಮಿಗಳು ಅಡಗಿಕೊಂಡಿರುವ ಸಾಧ್ಯತೆ ಇರುವುದಾಗಿ ಗೋಸ್ವಾಮಿ ಹೇಳಿದ್ದಾರೆ.
|