ನೋಯ್ಡಾದ ಅರುಷಿ ಹಾಗೂ ಹೇಮರಾಜ್ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ರಾಜ್‌ಕುಮಾರ್ ಮತ್ತು ಕಾಂಪೋಂಡರ್ ಕೃಷ್ಣನಿಗೆ ಜಾಮೀನು ಮಂಜೂರಾಗಿದೆ.
ಗಜಿಯಾಬಾದಿನ ಸೆಷನ್ಸ್ ಕೋರ್ಟ್ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿದೆ. 25,000 ರೂಪಾಯಿ ಮುಚ್ಚಳಿಕೆ ಪಡೆದು, ಇಬ್ಬರು ಜಾಮೀನುದಾರರ ಭರವಸೆಯೊಂದಿಗೆ ರಾಜ್‌ಕುಮಾರ್‌ಗೆ ಜಾಮೀನು ನೀಡಲಾಗಿದೆ.
ನೋಯ್ಡಾದ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗದಿತ ಅವಧಿಯೊಳಗೆ ಆರೋಪಪಟ್ಟಿ ಸಲ್ಲಿಸಲು ಸಿಬಿಐ ವಿಫಲವಾಗಿದ್ದು ಈ ಹಿನ್ನಲೆಯಲ್ಲಿ ಆರೋಪಿಗಳಿಬ್ಬರು ಜಾಮೀನು ಪಡೆದಿದ್ದಾರೆ.
ನೇಪಾಳಿ ಪ್ರಜೆಯಾಗಿರುವ ರಾಜ್‌ಕುಮಾರ್ ಜಾಮೀನು ಲಭ್ಯವಾದಲ್ಲಿ ನೇಪಾಳಕ್ಕೆ ತೆರಳಬಹುದು ಎಂದು ವಾದಿಸಿದ ಸಿಬಿಐ ಜಾಮೀನು ನೀಡಿಕೆಗೆ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ ಅಪರಾಧದಲ್ಲಿ ಆತನ ಪಾಲ್ಗೊಳ್ಳುವಿಕೆ ಕುರಿತು ವೈಜ್ಞಾನಿಕ ಪುರಾವೆಗಳಿವೆ ಎಂದೂ ಸಿಬಿಐ ತನ್ನ ವಾದದಲ್ಲಿ ತಿಳಿಸಿದೆ.
ಈ ಇಬ್ಬರು 13ರ ಹರೆಯದ ಅರುಷಿ ತಲ್ವಾರ್ ಹಾಗೂ ಆಕೆಯ ಮನೆಗೆಲಸದಾಳು ಹೇಮರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿದ್ದರು.
ಕೊಲೆಕೃತ್ಯದಲ್ಲಿ ಭಾಗಿಯಾಗಿದ್ದಾನೆಂದು ಶಂಕಿಸಲಾಗಿದ್ದ ತೃತೀಯ ವ್ಯಕ್ತಿ ವಿಜಯ್ ಮಂಡಲ್ ಎಂಬಾತನಿಗೆ ಕಳೆದ ಶನಿವಾರ ಜಾಮೀನು ಲಭಿಸಿದೆ.
ಈ ಪ್ರಕರಣದ ಕುರಿತು ಯಾವುದೇ ರಚನಾತ್ಮಕ ಪುರಾವೆ ಇಲ್ಲ ಎಂದು ಸಿಬಿಐ ಹೇಳಿದ್ದು, 90 ದಿನಗಳೊಳಗಾಗಿ ಆರೋಪಪಟ್ಟಿ ಸಲ್ಲಿಸಿರಲಿಲ್ಲ. ಇದರಿಂದಾಗಿ ಪ್ರಕರಣವು ಹಳ್ಳಹಿಡಿಯಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
|