ಗಣೇಶೋತ್ಸವದ ವೇಳೆ ಮುಂಬೈನ ಹಲವು ಗಣಪತಿ ಮಂಡಲಗಳಲ್ಲಿ ಸಂಗ್ರಹವಾದ ಹಣವನ್ನು ಬಿಹಾರ ನೆರೆ ಸಂತ್ರಸ್ಥರ ಪರಿಹಾರಕ್ಕಾಗಿ ನೀಡಲು ನಿರ್ಧರಿಸಲಾಗಿದೆ.
ಪ್ರತಿ ಬಾರಿಯೂ ಗಣೇಶೋತ್ಸವದ ಹತ್ತು ದಿನಗಳ ಸಂಗ್ರಹ ಹಣವನ್ನು ಯಾವುದಾದರೂ ಸಾಮಾಜಿಕ ಕಾರ್ಯಕ್ಕೆ ಬಳಸಲಾಗುತ್ತದೆ. ಅಂತೆಯೇ ಈ ಬಾರಿಯ ಸಂಗ್ರಹ ಹಣವನ್ನು ಬಿಹಾರದ ನೆರೆ ಸಂತ್ರಸ್ಥರಿಗೆ ನೀಡಲು ನಿರ್ಧರಿಸಲಾಗಿದೆ. ಬಿಹಾರದಲ್ಲಿ ಕೋಸಿ ನದಿ ಉಕ್ಕಿ ಹರಿದ ಪರಿಣಾಮ ಮಿಲಿಯಗಟ್ಟಲೆ ಮಂದಿ ತಮ್ಮ ಮನೆಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ.
ಮುಂಬೈಯ ಸುಪ್ರಸಿದ್ಧ ಗಣೇಶ ಮಂಡಲಗಳಲ್ಲಿ ಲಕ್ಷಾಂತರ ಮಂದಿ ಸಾಲುಗಟ್ಟುತ್ತಿದ್ದು, ಸಾಮಾಜಿಕ ಕಾರ್ಯಕ್ಕೆ ಬಳಸಲಾಗುವ ನಿಧಿಗೆ ಉದಾರವಾಗಿ ಧನ ಸಹಾಯ ಮಾಡುತ್ತಾರೆ.
ಮಂಡಲ ಹಣವನ್ನು ಬಿಹಾರ ಪರಿಹಾರ ನಿಧಿಗೆ ಕಳುಹಿಸಲು ಶಿವಸೇನೆಯು ಹೇಳಿದ್ದು, ಪ್ರತಿ ಗಣಪತಿ ಚಪ್ಪರದಿಂದಲೂ ಸ್ವಲ್ಪ ಹಣವನ್ನು ಖಂಡಿತವಾಗಿಯೂ ರಾಷ್ಟ್ರೀಯ ವಿಪತ್ತು ಪರಿಹಾರಕ್ಕೆ ಕಳುಹಿಸಲಾಗುವುದು ಎಂದು ಶಿವಸೇನಾ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.
ಅತಿ ದೊಡ್ಡ ಹಾಗೂ ಸುಪ್ರಸಿದ್ದ ಲಾಲ್‌ಭಾಗ್ ಚಾ ರಾಜ ಮಂಡಲ ಸೇರಿದಂತೆ ಹೆಚ್ಚಿನ ಮಂಡಲಗಳು ಈ ಮನವಿಯನ್ನು ಪರಿಗಣಿಸಲು ನಿರ್ಧರಿಸಿವೆ.
|