ದೇಶದ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ 500 ಕೋಟಿ ರೂ.ವಿಶೇಷ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವುದಾಗಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಶುಕ್ರವಾರ ಇಂದಿಲ್ಲಿ ತಿಳಿಸಿದ್ದಾರೆ.
ನಕ್ಸಲ್ ಸಮಸ್ಯೆ ಹೆಚ್ಚಲು ಆ ಪ್ರದೇಶಗಳು ಆರ್ಥಿಕವಾಗಿ ಹಿಂದುಳಿದಿರುವುದೇ ಕಾರಣ. ಬಡತನದಿಂದಾಗಿ ಯುವಕರು ಎಡಪಂಥೀಯತ್ತ ಒಲವು ತೋರುತ್ತಿದ್ದಾರೆ.
ಈ ಕಾರಣದಿಂದಾಗಿ ಇಂಥ ಪ್ರದೇಶಗಳನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿ ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯ, ಭದ್ರತೆ ಒದಗಿಸುವುದು ಈ ಯೋಜನೆಯ ಮೂಲ ಉದ್ದೇಶ ಎಂದು ಪಾಟೀಲ್ ಹೇಳಿದರು.
ಅಲ್ಲದೇ ನಕ್ಸಲಿಸಂ ಮತ್ತು ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಅರೆಸೇನಾ ಪಡೆಯನ್ನು ಮತ್ತಷ್ಟು ಸಶಕ್ತಗೊಳಿಸುವುದಾಗಿ ಹೇಳಿದರು.
ಅದರಂತೆ ಕಾನೂನು ಸುವ್ಯಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಠಾಣೆಗಳನ್ನು ಆಧುನಿಕರಣಗೊಳಿಸಿ, ಪೊಲೀಸ್ ಪಡೆಯ ಬಲವನ್ನು ಹೆಚ್ಚಿಸುವಂತೆ ರಾಜ್ಯ ಸರ್ಕಾರಗಳನ್ನು ಕೋರಲಾಗಿದೆ ಎಂದರು.
|