ಡಿಎಂಕೆ ಸ್ಥಾಪಕ ಅಣ್ಣಾದೊರೈ ಅವರ ಹುಟ್ಟುಹಬ್ಬದ ಕೊಡುಗೆಯಾಗಿ ತಮಿಳುನಾಡು ಡಿಎಂಕೆ ಸರ್ಕಾರ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸುಮಾರು 1,400 ಮಂದಿ ಕೈದಿಗಳನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ.
ಸೆ.15ರಂದು ಡಿಎಂಕೆ ಸ್ಥಾಪಕ ಸಿಎನ್ ಅಣ್ಣಾದೊರೈ ಅವರು ನೂರನೇ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿಯವರು ಕೈದಿಗಳ ಮೇಲೆ ಉದಾರತೆಯನ್ನು ತೋರಿದ್ದು, ಪ್ರಸ್ತುತ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಸಾವಿರಕ್ಕೂ ಮಿಕ್ಕಿ ಕೈದಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.
ಇದೀಗ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಏಳುವರ್ಷಗಳಷ್ಟು ಕಾಲ ಸೆರೆಮನೆ ವಾಸ ಅನುಭವಿಸಿದ್ದು, 60ವರ್ಷ ಮೇಲ್ಪಟ್ಟವರಿಗೆ ಐದು ವರ್ಷಗಳ ಕಾಲ ಶಿಕ್ಷೆಯಿಂದ ವಿನಾಯಿತಿ ನೀಡಲಾಗುತ್ತಿದೆ.
ಕೈದಿಗಳ ಬಿಡುಗಡೆಗೆ ಸಂಬಂಧಿಸಿದಂತೆ ರಾಜ್ಯಪಾಲರೊಂದಿಗೆ ಕಾನೂನು ವ್ಯಾಪ್ತಿಯ ಕುರಿತು ಮಾತನಾಡಿ,ಅವರ ವಿಶೇಷಾಧಿಕಾರದ ಮೂಲಕ ಅನುಮತಿ ಪಡೆದ ಬಳಿಕ ಈ ಘೋಷಣೆ ಹೊರಡಿಸಲಾಗಿದೆ ಎಂದು ಕರುಣಾನಿಧಿ ತಿಳಿಸಿದ್ದಾರೆ.
ಆದರೆ ಶಿಕ್ಷೆಗೊಳಪಟ್ಟ ಯಾವೆಲ್ಲ ಕೈದಿಗಳು ಬಂಧಮುಕ್ತರಾಗಬಹುದು ಎಂಬ ಕುರಿತು ಉನ್ನತ ಮಟ್ಟದ ಸಮಿತಿ ಕಾನೂನುಬದ್ಧ ನೆಲೆಯಲ್ಲಿ ಹೆಸರಿನ ಪಟ್ಟಿಯನ್ನು ಸಿದ್ದಗೊಳಿಸಲಿದೆ ಎಂದು ಹೇಳಿದ್ದಾರೆ.
ಜೀವಾವಧಿ ಶಿಕ್ಷೆಗೊಳಗಾದವರಲ್ಲಿ ಮಹಿಳೆಯರು, ಕೊಲೆ ಮತ್ತು ಅತ್ಯಾಚಾರ, ಕೋಮು ಹಿಂಸಾಚಾರ ಪ್ರಕರಣಗಳಲ್ಲಿ ಭಾಗಿಯಾದವರು ಸೇರಿದ್ದಾರೆ.
ಈ ರೀತಿಯಾಗಿ ಕೈದಿಗಳನ್ನು ಬಂಧಮುಕ್ತರನ್ನಾಗಿಸುತ್ತಿರುವುದು ಡಿಎಂಕೆ ಮಾತ್ರ ಮೊದಲಿನದ್ದಲ್ಲ, ಈ ಹಿಂದಿನ ಎಐಎಡಿಎಂಕೆಯ ಜಯಲಲಿತಾ ಕೂಡ ತನ್ನ ಹುಟ್ಟುಹಬ್ಬದ ಪ್ರಯುಕ್ತ ಕೈದಿಗಳನ್ನು ಮುಕ್ತಗೊಳಿಸಿದ್ದರು.
|