ನವದೆಹಲಿ: ದೆಹಲಿಯನ್ನು ಶನಿವಾರದ ಸರಣಿ ಸ್ಫೋಟವು ತಲ್ಲಣಗೊಳಿಸಿರುವ ಹಿನ್ನೆಲೆಯಲ್ಲಿ ಉಗ್ರರ ಸಂಭಾವ್ಯ ಮುಂದಿನ ಗುರಿ ಯಾವುದಾಗಿರಬಹುದೆಂದು ಪತ್ತೆ ಹಚ್ಚಲು ಪ್ರಯತ್ನಿಸುತ್ತಿರುವ ಗುಪ್ತಚರ ದಳವು, ಭಾರತದ ವಾಣಿಜ್ಯ ರಾಜಧಾನಿ, ಮುಂಬೈ ಅವರ ಮುಂದಿನ ಗುರಿಯಾಗಿರ ಬಹುದಾದ ಸಾಧ್ಯತೆ ಇದೆ ಎಂದು ಹೇಳಿದೆ.
"ಈ ಕುರಿತು ಯಾವುದೇ ಎಚ್ಚರಿಕೆಯನ್ನು ನೀಡಲು ಬಯಸುವುದಿಲ್ಲ, ಆದರೆ ಉಗ್ರರರನ್ನು ಮಟ್ಟಹಾಕಲು ಸಾಧ್ಯವಿರುವ ಎಲ್ಲಾ ಲೆಕ್ಕಾಚಾರಗಳನ್ನು ಮಾಡಬೇಕಿದೆ" ಎಂದು ಹೇಳಿರುವ ತನಿಖಾ ಮೂಲಗಳು, ಮುಂಬೈ ಮುಂದಿನ ಗುರಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಿವೆ.
ದೆಹಲಿ, ಅಹಮದಾಬಾದ್ ಮತ್ತು ಜೈಪುರಗಳಲ್ಲಿ ನಡೆಸಲಾಗಿರುವ ಸ್ಫೋಟಗಳ ಪ್ರಮುಖ ರೂವಾರಿ ಎಂದು ಭದ್ರತಾ ಏಜೆನ್ಸಿಗಳು ಸಂಶಯಿಸಿರುವ ಪ್ರಮುಖ ಟೆಕ್ಕಿ ಅಬ್ದುಸ್ ಸುಭಾನ್ ಎಂಬಾತ ಮುಂಬೈನಿಂದ ಇ-ಮೇಲ್ ಕಳುಹಿಸಿದ್ದು, ಆತ ಮುಂಬೈನಲ್ಲಿ ಅವಿತುಕೊಂಡಿದ್ದಾನೆ ಎಂದು ಸಂಶಯಿಸಲಾಗಿದೆ.
ಈ ಹಿಂದೆ ನಡೆಸಲಾಗಿರುವ ಮುಂಬೈ ರೈಲು ಸ್ಫೋಟಗಳಲ್ಲಿ ಆತನ ಹೆಸರು ಕೇಳಿ ಬಂದಿರುವ ಬಳಿಕ, ಆತ ಪೊಲೀಸರಿಗೆ ಮೂರು ಬಾರಿ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.
ಭಾರತದ ವಿರುದ್ಧ ಚಳುವಳಿ ಹೂಡಿರುವ ಲಷ್ಕರೆ ಇ-ತೋಯ್ಬಾವೂ ರಾಷ್ಟ್ರದ ವಾಣಿಜ್ಯ ನಗರಿಯ ಮೇಲೆ ದಾಳಿ ನಡೆಸಬಹುದೆಂದೂ ಗುಪ್ತಚರ ದಳಗಳು ಸಂಶಯಿಸಿವೆ.
ಇದಲ್ಲದೆ ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆಯ ವಿರುದ್ಧದ ಆಕ್ರೋಶವನ್ನು ಸುಭಾನ್ ತನ್ನ ಇ-ಮೇಲ್‌ನಲ್ಲಿ ವ್ಯಕ್ತಪಡಿಸಿದ್ದಾನೆ. "ಬಾಳ್ ಠಾಕ್ರೆ ಮುಕ್ತವಾಗಿದ್ದಾರೆ ಅದರೆ ಇಜಾಜ್ ಪಠಾಣ್ ಸತ್ತಿದ್ದಾರೆ. ಟೈಗರ್ ಮೆಮನ್ ಅಲ್ಲಿ ಇಲ್ಲಿ ಓಡಾಡುತ್ತಿದ್ದರೆ, ಮುಂಬೈ ಮತ್ತು ಮಹಾರಾಷ್ಟ್ರಗಳ ಬೀದಿಯಲ್ಲಿ ಶಿವಸೇನಾ ಭಯೋತ್ಪಾದನೆಯನ್ನು ಪಸರಿಸುತ್ತಿದೆ" ಎಂದು ಆತ ಮೇ 13ರಂದು ಬರೆದಿರುವ ಇ-ಮೇಲ್‌ನಲ್ಲಿ ಎಚ್ಚರಿಸಿದ್ದಾನೆ.
ತನ್ನ ಇ-ಮೇಲ್‌ನಲ್ಲಿ ಸುಬಾನ್, ಮಹಾರಾಷ್ಟ್ರದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ದೂರಿದ್ದು, ಇದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಮತ್ತು ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಮೇಲೆ ವ್ಯಗ್ರವಾಗಿರುವುದಾಗಿ ಹೇಳಿದ್ದು, ಮತ್ತು ಮುಂಬೈ ಸ್ಥಳೀಯ ರೈಲುಗಳಲ್ಲಿ ಮತ್ತೊಮ್ಮೆ ಬಾಂಬ್ ಇರಿಸುವುದಾಗಿ ಬೆದರಿಕೆ ಹಾಕಿದ್ದಾನೆ.
|