ಭಯೋತ್ಪಾದನೆ ಸಮಸ್ಯೆಯನ್ನು ಹತ್ತಿಕ್ಕಲು ಬರಿಯ ಕಾನೂನು ಮಾತ್ರ ಸಾಕಾಗುವುದಿಲ್ಲ ಎಂದು ಹೇಳಿರುವ ಕೇಂದ್ರ ಗೃಹಸಚಿವ ಶಿವರಾಜ್ ಪಾಟೀಲ್, ಪ್ರಸಕ್ತ ಸನ್ನಿವೇಶವನ್ನು ನಿಭಾಯಿಸಲು ಕೋತ್ವಾಲ್ ವ್ಯವಸ್ಥೆಯನ್ನು ಮತ್ತೆ ಪ್ರವರ್ತನಗೊಳಿಸುವ ಸಲಹೆ ನೀಡಿದ್ದಾರೆ.
ಅಸ್ಸಾಮಿನ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಲು ಇಲ್ಲಿಗಾಗಮಿಸಿದ್ದ ಸಚಿವರು, ಸಂಸತ್ ಮತ್ತು ಮುಂಬೈ ಸ್ಫೋಟಗಳು ಸಂಭವಿಸಿದ ವೇಳೆ ಕಠಿಣ ಕಾನೂನು ಜಾರಿಯಲ್ಲಿತ್ತು ಎಂದು ನುಡಿದರು.
"ಯಾವುದೇ ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಅವುಗಳಿಗೆ ನಾನು ಸಂಸತ್‌ನಲ್ಲಿ ಉತ್ತರಿಸುತ್ತೇನೆ. ಇದು ರಾಜಕೀಯ ವಿಚಾರವಲ್ಲ, ಇದು ಮಾನವೀಯತೆಯ ವಿಚಾರವಾಗಿದ್ದು ನಾವೆಲ್ಲರೂ ಕಾಳಜಿ ಹೊಂದಿದ್ದೇವೆ. ನಾವು ಯಾವುದೇ ಅಪವಾದಿ ನಿಲುವು ತಳೆಯುವಂತಿಲ್ಲ" ಎಂದು ಲೋಕೋಪ್ರಿಯ ಗೋಪಿನಾಥ್ ಬೋರ್ಡೋಲಿ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಗ್ರಹ ಸಚಿವರು ನುಡಿದರು.
ದೆಹಲಿ ಸ್ಫೋಟವನ್ನು ಪ್ರಸ್ತಾಪಿಸಿದ ಅವರು "ಸಾಕ್ಷಿಗಳನ್ನು ಸಂಗ್ರಹಿಸಲಾಗಿದೆ. ಅವುಗಳನ್ನು ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸಬೇಕಾಗಿದೆ. ತನಿಖೆ ಅಂತಿಮಗೊಳ್ಳುವ ತನಕ ಈ ಕುರಿತಂತೆ ಯಾವುದೇ ತಿರ್ಮಾನಕ್ಕೆ ಬರುವಂತಿಲ್ಲ" ಎಂದು ನುಡಿದರು.
ಕೋತ್ವಾಲಿ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರುವ ಅವಶ್ಯಕತೆ ಇದೆ ಎಂದು ಹೇಳಿರುವ ಅವರು ಪ್ರತಿ ಹಳ್ಳಿಗಳಲ್ಲೂ ಜನರ ಒಂದು ಗುಂಪು ಪೊಲೀಸರ ಕಣ್ಣು ಮತ್ತು ಕಿವಿಗಳಂತೆ ವರ್ತಿಸುವ ಅವಶ್ಯಕತೆ ಇದೆ ಎಂದು ನುಡಿಯುತ್ತಾ, ಪಾಶ್ಚಾತ್ಯ ಹಾಗೂ ನಮ್ಮ ಸಾಂಪ್ರದಾಯಿಕ ಕ್ರಮಗಳನ್ನು ನಾನು ಅನುಸರಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ.
|