ರಾಜಧಾನಿ ದೆಹಲಿಯಲ್ಲಿ ನಡೆದಿರುವ ಸರಣಿ ಸ್ಫೋಟದ ಹಿನ್ನೆಲೆಯಲ್ಲಿ, ಆಂತರಿಕ ಭದ್ರತೆ ಕುರಿತು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತುರ್ತು ಸಭೆ ಕರೆದಿದ್ದಾರೆ.
ಸಭೆಗೆ ಎಲ್ಲ ಹಿರಿಯ ಕಾಂಗ್ರೆಸಿಗರಿಗೆ ಆಹ್ವಾನ ನೀಡಲಾಗಿದ್ದು, ಉಗ್ರವಾದದ ಬಗ್ಗೆ ಮೆದು ಧೋರಣೆ ಹೊಂದಿದ್ದಾರೆ ಎಂಬ ಆರೋಪಕ್ಕೆ ಈಡಾಗಿರುವ ಗೃಹಸಚಿವ ಶಿವರಾಜ್ ಪಾಟೀಲ್ ಅವರನ್ನು ಆಹ್ವಾನಿಸದೇ ಇರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ.
ಪಾಟೀಲ್ ಅವರು ರಾಷ್ಟ್ರದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ಕೃತ್ಯವನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಅವರ ರಾಜೀನಾಮೆಗೆ ಒತ್ತಾಯಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಪಕ್ಷವೂ, ಆಂತರಿಕ ಭದ್ರತೆ ದೃಷ್ಟಿಯಿಂದ ಪಾಟೀಲ್ ಬಗ್ಗೆ 'ಮೆದು ಧೋರಣೆ' ಹೊಂದಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿದೆ.
ಪಕ್ಷದ ಹಿರಿಯರಾದ ಎ.ಕೆ.ಆಂಟನಿ, ಪ್ರಣಬ್ ಮುಖರ್ಜಿ, ಮಾರ್ಗರೆಟ್ ಆಳ್ವ, ಅಹ್ಮದ್ ಪಟೇಲ್, ಜನಾರ್ದನ್ ದ್ವಿವೇದಿ, ವೀರಪ್ಪ ಮೊಯ್ಲಿ, ದಿಗ್ವಿಜಯ್ ಸಿಂಗ್ ಮೊದಲಾದವರು ಆಹ್ವಾನಿತರ ಪಟ್ಟಿಯಲ್ಲಿ ಸೇರಿದ್ದಾರೆ.
ಯಾವುದೇ ಆತಂಕವಿಲ್ಲದಂತೆ ನಿರ್ಭೀತಿಯಿಂದ ಬುಡಮೇಲು ಕೃತ್ಯಗಳನ್ನು ನಡೆಸುತ್ತಿರುವ ಉಗ್ರರರನ್ನು ನಿಭಾಯಿಸುವಲ್ಲಿ ಪಾಟೀಲ್ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಟೀಕೆಗೆಳು ಎಲ್ಲೆಡೆಯಿಂದ ವ್ಯಕ್ತವಾಗಿದೆ.
ರೈಲ್ವೇ ಸಚಿವ ಲಾಲೂಪ್ರಸಾದ್ ಯಾದವ್ ಅವರೂ, ಗೃಹ ಸಚಿವರು ಸೂಕ್ತಕ್ರಮ ಕೈಗೊಳ್ಳುತ್ತಿಲ್ಲ ಎಂಬ ಬಹಿರಂಗ ಹೇಳಿಕೆ ನೀಡಿದ್ದು ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇತ್ತೀಚಿನ ದಿನಗಳಲ್ಲಿ ಗುಪ್ತಚರ ವ್ಯವಸ್ಥೆ ದುರ್ಬಲಗೊಂಡಿದೆ, ಆಂತರಿಕ ಭದ್ರತೆ ಕುರಿತು ಸಮಸ್ಯೆಗಳು ಹೆಚ್ಚುತ್ತಿದ್ದು, ಇವುಗಳನ್ನು ನಿಭಾಯಿಸುವಲ್ಲಿ ಸಾಕಷ್ಟು ಕ್ರಮಕೈಗೊಂಡಿಲ್ಲ ಎಂದು ಲಾಲೂ ದೂರಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ನಡೆದಿರುವ ಸರಣಿ ಸ್ಫೋಟ ಯೋಜನೆಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಮತ್ತು ಗುಪ್ತಚರ ಇಲಾಖೆಗಳು ಯಾಕೆ ವಿಫಲವಾಗಿವೆ ಎಂಬುದನ್ನು ತಿಳಿಯಲು ಬಯಸುವುದಾಗಿ ಹೇಳಿರುವ ಲಾಲೂ, ತಾನು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರೊಂದಿಗೆ ಮಾತುಕತೆ ನಡೆಸಿದ್ದು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿರುವುದಾಗಿ ತಿಳಿಸಿದ್ದಾರೆ.
|