ರಾಜಧಾನಿಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 'ಕೀಳು ಮಟ್ಟದ' ರಾಜಕೀಯ ಮಾಡುತ್ತಿರುವ ವಿರೋಧಪಕ್ಷಗಳ ಗೃಹ ಸಚಿವರ ರಾಜೀನಾಮೆ ಬೇಡಿಕೆಯನ್ನು ಕಾಂಗ್ರೆಸ್ ತಿರಸ್ಕರಿಸಿದೆ.
ಭಯೋತ್ಪಾದನೆ ಸಂಬಂಧಿತ ಅಪರಾಧಗಳ ಬಗ್ಗೆ ಕೇಂದ್ರೀಯ ಏಜೆನ್ನಿಯನ್ನು ಸ್ಥಾಪಿಸಲು ಎಲ್ಲ ರಾಜ್ಯ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ನೆರವು ನೀಡಬೇಕೆಂದು ಕೇಂದ್ರ ಸರ್ಕಾರ ಕೋರಿದೆ.
ಸರಣಿ ಸ್ಫೋಟ ಘಟನೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಅವರ ರಾಜೀನಾಮೆಗೆ ಆಗ್ರಹಿಸಿರುವ ಪ್ರತಿಪಕ್ಷಗಳ ಬೇಡಿಕೆ ಕೀಳು ಮಟ್ಟದ ರಾಜಕೀಯವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಅಲ್ಲದೇ ಎನ್‌ಡಿಎ ಅಧಿಕಾರಾವಧಿಯಲ್ಲಿ ಗೃಹಸಚಿವರಾಗಿದ್ದ ಸಂದರ್ಭದಲ್ಲಿ ವಿರೋಧಪಕ್ಷಗಳು ಎಲ್.ಕೆ.ಆಡ್ವಾಣಿಯವರ ರಾಜೀನಾಮೆ ಕೇಳಿದಾಗ ಎಷ್ಟು ಬಾರಿ ನೀಡಿದ್ದಾರೆ ಎಂದು ಅವರು ಖಾರವಾಗಿ ಪ್ರಶ್ನಿಸಿದ ಅವರು, ಪ್ರತಿ ಬಾರಿ ಆ ಬೇಡಿಕೆಯನ್ನು ಬಿಜೆಪಿ ತಿರಸ್ಕರಿಸಿತ್ತು ಎಂದರು.
ಸೋನಿಯಾ ತುರ್ತು ಸಭೆ: ದೇಶದ ಆಂತರಿಕ ಭದ್ರತೆಯ ಕುರಿತು ಚರ್ಚೆ ನಡೆಸುವ ಅಂಗವಾಗಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ಗೃಹ ಸಚಿವ ಶಿವರಾಜ್ ಪಾಟೀಲ್ ಅವರ ಅನುಪಸ್ಥಿತಿಯಲ್ಲಿ ಪಕ್ಷದ ಹಿರಿಯ ಮುಖಂಡರೊಂದಿಗೆ ತುರ್ತು ಸಭೆ ನಡೆಸಿದರು.
ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ರಕ್ಷಣಾ ಸಚಿವ ಎ.ಕೆ.ಆಂಟನಿ,ದಿಗ್ವಿಜಯ್ ಸಿಂಗ್,ಮಾರ್ಗರೆಟ್ ಆಳ್ವ, ಅಹಮ್ಮದ್ ಪಟೇಲ್ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಭೆಯಲ್ಲಿ ದೆಹಲಿ ಸರಣಿ ಬಾಂಬ್ ಸ್ಫೋಟ ಮತ್ತು ಅಲ್ಲಿನ ಪರಿಸ್ಥಿತಿ ಹಾಗೂ ದೇಶದ ಆಂತರಿಕ ಭದ್ರತೆಯನ್ನು ಮತ್ತಷ್ಟು ಬಲಗೊಳಿಸುವ ಕುರಿತು ಮಾತುಕತೆ ನಡೆಯಲಿದೆ ಎಂದು ಪಕ್ಷದ ವರಿಷ್ಠರು ತಿಳಿಸಿದ್ದಾರೆ.
|