ರಾಜಧಾನಿಯಲ್ಲಿ ಬಾಂಬ್ ಸ್ಫೋಟ ನಡೆದ ಎರಡು ದಿನಗಳ ನಂತರ, ದೆಹಲಿ ಸ್ಫೋಟ ಸಂಭವದ ಕುರಿತಾಗಿ ಕೇಂದ್ರಕ್ಕೆ ಮೊದಲೇ ತಿಳಿದಿತ್ತು ಎಂಬ ವಿಚಾರವನ್ನು ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಬಹಿರಂಗಪಡಿಸಿದ್ದಾರೆ.
ಸ್ಫೋಟ ನಡೆಯುವ ಸ್ಥಳ, ಸಮಯ ಅದನ್ನು ನಡೆಸುವ ರೀತಿಯು ತಿಳಿಯದೇ ಇದ್ದುದರಿಂದ ಇದರ ಕುರಿತಾಗಿ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂಬುದಾಗಿ ಪಾಟೀಲ್ ಮಾಧ್ಯಮ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸರಣಿ ಸ್ಫೋಟಗಳಲ್ಲಿನ ಗುಪ್ತಚರ ವೈಫಲ್ಯಗಳನ್ನು ತಳ್ಳಿಹಾಕಿರುವ ಪಾಟೀಲ್, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತಿಳಿಸುವ ಮೊದಲೇ ಈ ಮಾಹಿತಿಯು ಕೇಂದ್ರಕ್ಕೆ ತಿಳಿದಿತ್ತು ಎಂದು ಸೂಚಿಸಿದ್ದಾರೆ.
ಈ ನಡುವೆ, ಕಾಂಗ್ರೆಸ್ ಪಕ್ಷದಿಂದ ರಾಜೀನಾಮೆ ಒತ್ತಾಯದ ಸಾಧ್ಯತೆಯ ಶಂಕೆಯನ್ನು ತಳ್ಳಿಹಾಕಿದ ಅವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪೂರ್ಣ ಆಶೀರ್ವಾದವನ್ನು ತಾನು ಹೊಂದಿರುವುದಾಗಿ ಹೇಳಿದ್ದಾರೆ.
ಸೋಮವಾರ ಮುಂಜಾನೆ ನಡೆದ ಪಕ್ಷದ ಹಿರಿಯ ನಾಯಕರ ತುರ್ತು ಸಭೆಗೆ ಆಹ್ವಾನಿಸದಿರುವುದು, ತಮ್ಮ ಸ್ಥಾನಕ್ಕೆ ಚ್ಯುತಿ ಬರುವ ಸಾಧ್ಯತೆಯ ಮುನ್ಸೂಚನೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, "ನನ್ನ ಪಕ್ಷ ಅಥವಾ ನನ್ನ ನಾಯಕಿ ಕೆಲಸ ಮಾಡುವ ರೀತಿ ಅದಲ್ಲ. ಮಾನವ ಹಕ್ಕುಗಳಿಗೆ ಚ್ಯುತಿ ಬರದಂತೆ ಅಪರಾಧ ಪ್ರಕ್ರಿಯೆ ಮತ್ತು ಭಯೋತ್ಪಾದನಾ ಚಟುವಟಿಕೆಗಳನ್ನು ನಿಯಂತ್ರಿಸುವುದು ನಮ್ಮ ಪಕ್ಷದ ಮೌಲ್ಯವಾಗಿದೆ " ಎಂದರು.
|