ರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದಿನೆದಿನೇ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಕಳವಳ ವ್ಯಕ್ತಪಡಿಸಿರುವ ಹಲವು ಕಾಂಗ್ರೆಸ್ ನಾಯಕರು, ಶಿವರಾಜ್ ಪಾಟೀಲ್ ರಾಜೀನಾಮೆಗೆ ಒತ್ತಡ ಹೇರುತ್ತಿದ್ದಾರೆ.
ಭಯೋತ್ಪಾದನೆಯ ವಿರುದ್ಧ ಹೋರಾಟದ ಕುರಿತು ಬರಿ ಮಾತು ಮಾತ್ರ, ಯಾವುದೇ ಕೃತಿಗಿಳಿದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಇದು ಪಾಟೀಲರಿಗೆ ದುಬಾರಿಯಾಗುವ ಲಕ್ಷಣಗಳು ತೋರುತ್ತಿವೆ.
ಈ ಮಧ್ಯೆ, ಕೆಲವು ಕಾಂಗ್ರೆಸ್ ನಾಯಕರು, ಪಾಟೀಲರನ್ನು ತೆಗೆದು ಹಾಕುವುದು ತಪ್ಪು ಸೂಚನೆಯನ್ನು ರವಾನಿಸಲಿದೆ ಎಂಬ ವಾದವನ್ನೂ ಮುಂದಿಡುತ್ತಿದ್ದಾರೆ. ಕಾಂಗ್ರೆಸ್ ವಕ್ತಾರ ಅಭಿಷೇಕ್ ಮಾನು ಸಿಂಘಾವಿ ಅವರೂ ಪಾಟೀಲರ ರಾಜೀನಾಮೆ ವಿಚಾರವನ್ನು ತಳ್ಳಿಹಾಕಿದ್ದು, ಪಕ್ಷವು ಭಯೋತ್ಪಾದನೆಯ ವಿರುದ್ಧ 'ಶೂನ್ಯ ಸಹನೆ ನೀತಿ'ಯನ್ನು ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.
ಆದರೆ ಕಾಂಗ್ರೆಸ್ ತನ್ನ ಮಿತ್ರ ಪಕ್ಷಗಳ ಒತ್ತಡಕ್ಕೆ ಸಿಲುಕಿದೆ. ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಭಯತ್ಪಾದನೆಯನ್ನು ಮಟ್ಟ ಹಾಕಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಸೋಮವಾರ ಬಹಿರಂಗವಾಗಿ ಪ್ರಶ್ನಿಸಿದ್ದರು. ಅಲ್ಲದೆ ಅವರು ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಭಯೋತ್ಪಾದನೆಯ ಕುರಿತು ಚರ್ಚಿಸಲು ತುರ್ತು ಸಭೆ ಕರೆಯುವಂತೆ ಹೇಳಿದ್ದರು.
ಆದರೆ, ಪಕ್ಷದ ವರಿಷ್ಠೆ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಈ ಕುರಿತು ಇದುವರೆಗೆ ಯಾವುದೇ ನಿರ್ಧಾರಗಳನ್ನು ಕೈಗೊಂಡಿಲ್ಲ ಎಂದು ಮೂಲಗಳು ತಿಳಿವೆ. ಈ ವಾರಾಂತ್ಯದಲ್ಲಿ ಸ್ಪಷ್ಟ ನಿಲುವು ತಳೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಉಗ್ರವಾದದ ವಿಚಾರದಲ್ಲಿ ಕಾಂಗ್ರೆಸ್, ತನ್ನ ಪಕ್ಷದೊಳಗೆ ಹಾಗೂ ಯುಪಿಎ ಮಿತ್ರಪಕ್ಷಗಳಿಂದಲೂ ಟೀಕೆಗಳನ್ನು ಎದುರಿಸುತ್ತಿದೆ. ಶಿವರಾಜ್ ಪಾಟೀಲ್ ಅವರು ಗೃಹಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿಲ್ಲ ಎಂಬ ದೂರುಗಳನ್ನು ಅವರು ಎದುರಿಸುತ್ತಿದ್ದಾರೆ.
|