ಒರಿಸ್ಸಾದ ಗಲಭೆಪೀಡಿತ ಕಂಧಮಲ್ ಜಿಲ್ಲೆಯಲ್ಲಿ ಮತ್ತೆ ಹಿಂಸಾಚಾರ ಮರುಕಳಿಸಿದ್ದು, ಓರ್ವ ಪೊಲೀಸ್ ಹತ್ಯೆಯಾಗಿರುವ ಕುರಿತು ವರದಿಯಾಗಿದೆ.
ಸುಮಾರು 500 ಮಂದಿಯ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಇಕ್ಕಿದ್ದು, ಇತರ ಹಲವಾರು ವಾಹನಗಳಿಗೂ ಕಿಚ್ಚಿಕ್ಕಿರುವುದಾಗಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಕ್ರುಟಾಂಗಡ ಎಂಬಲ್ಲಿ ಗಲಭೆಯನ್ನು ಹತ್ತಿಕ್ಕಲು ಪೊಲೀಸರು ಗುಂಡು ಹಾರಿಸಿದ್ದು, ಇದಾದ ಎರಡು ದಿನಗಳ ಬಳಿಕ ಸೋಮವಾರ ರಾತ್ರಿ ಜಿಲ್ಲೆಯ ಗೋಚಪಡ ಪ್ರದೇಶದಲ್ಲಿ ಮತ್ತೆ ಹಿಂಸಾಚಾರ ಮರುಕಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸ್ ಗುಂಡು ಹಾರಾಟದ ವೇಳೆ ಮೂರು ವ್ಯಕ್ತಿಗಳು ಹತರಾಗಿದ್ದರು.
ಪೊಲೀಸ್ ಠಾಣೆಗೆ ಬೆಂಕಿ ಇಕ್ಕಿರುವ ಉದ್ರಿಕ್ತ ಗುಂಪು, ಪೊಲೀಸ್ ಜೀಪು, ಮೋಟಾರ್ ಸೈಕಲ್ ಸೇರಿದಂತೆ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದೆ.
ಕಳೆದ ರಾತ್ರಿಯ ಪೊಲೀಸ್ ಸಾವು ಸೇರಿದಂತೆ ವಿಶ್ವಹಿಂದೂ ಪರಿಷತ್ ನಾಯಕ ಸ್ವಾಮಿ ಲಕ್ಷ್ಮಣಾನಂದ ಕೊಲೆಯ ಬಳಿಕ ನಡೆದ ಹಿಂಸಾಚಾರದಲ್ಲಿ ಸತ್ತವರ ಸಂಖ್ಯೆ ಒಟ್ಟು 25ಕ್ಕೇರಿದೆ.
|