ರಾಷ್ಟ್ರದ ವಿವಿಧೆಡೆ ನಡೆಸಲಾಗಿರುವ ಭಯೋತ್ಪಾದನಾ ಕೃತ್ಯಗಳಲ್ಲಿ ಟೆಕ್ಕಿ ಅಬ್ದುಲ್ ಸುಭಾನ್ ಖರೇಶಿ ಅಲಿಯಾಸ್ ತಖೀರ್‌ನ ಕೈವಾಡದ ಕುರಿತು ಸಂಶಯಗಳು ದಟ್ಟವಾಗುತ್ತಿದ್ದು, ಈತನನ್ನು ಅಲ್-ಖೈದಾ ಮುಖ್ಯಸ್ಥ ಒಸಮಾ ಬಿನ್ ಲಾಡೆನ್‌ಗೆ ಸರಿಗಟ್ಟುವ ಭಾರತದ ಉಗ್ರ ಎಂದು ಬಣ್ಣಿಸಲಾಗುತ್ತಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರ ರೇಖಾಚಿತ್ರ ಬಿಡುಗಡೆ ಮಾಡಲಾಗಿದೆ.
ದೆಹಲಿಯಲ್ಲಿ ನಡೆಸಲಾಗಿರುವ ಸರಣಿ ಬಾಂಬ್ ಸ್ಫೋಟದ ಹಿಂದೆ ಇದೆ ಎನ್ನಲಾಗಿರುವ ಭಯೋತ್ಪಾದನಾ ಸಂಘಟನೆಯ ತಾಂತ್ರಿಕ ಮೆದುಳು ಈತನೇ ಎಂದು ಪೊಲೀಸರು ಹೇಳುತ್ತಿದ್ದಾರೆ.
ಸ್ಫೋಟ ನಡೆಯುವ ಕೆಲವು ತಿಂಗಳ ಹಿಂದೆ ತಕೀರ್ ಹಾಗೂ ಆತನ ನಾಲ್ವರು ಸಹಚರರು ಇಮ್ರಾನ್ ಎಂಬಾತನೊಂದಿಗೆ ಅಹಮದಾಬಾದಿನಲ್ಲಿ ತಂಗಿದ್ದು, ಇಲ್ಲಿ ದೆಹಲಿಯಲ್ಲಿ ಸ್ಫೋಟ ನಡೆಸುವ ಕುರಿತು ಚರ್ಚಿಸಲಾಗಿತ್ತು ಎಂದು ಮೂಲಗಳು ಹೇಳಿವೆ.
ಕೆಲವು ದಿನಗಳ ಬಳಿಕ ತನ್ನ ತಾಣವನ್ನು ಬದಲಿಸಿದ ತಖೀರ್, ದೆಹಲಿ ಯೋಜನೆಗೆ ಅಂತಿಮ ರೂಪು ನೀಡುವ ಪ್ರಕ್ರಿಯೆಯಲ್ಲಿ ತಾನಿರುವುದಾಗಿ ಇಮ್ರಾನ್‌ಗೆ ತಿಳಿಸಿದ್ದ.
ಅಹಮದಾಬಾದ್ ಸ್ಫೋಟಗಳ ಬಳಿಕ, ಕ್ಷಿಪ್ರದಲ್ಲಿ ಬಂಧನಕ್ಕೀಡಾಗಿರುವ ಇಮ್ರಾನ್‌ನನ್ನು ದೆಹಲಿ ಪೊಲೀಸರ ತಂಡ ಒಂದು ನಿಕಟವಾಗಿ ಪ್ರಶ್ನಿಸುತ್ತಿದೆ ಎಂದು ಹೇಳಲಾಗಿದೆ. ಅಹಮದಾಬಾದ್ ಪೊಲೀಸರು ಅಲ್ಮಜೇಬ್ ಅಫ್ರಿದಿ, ಮುಜೀಬ್ ಜಮೀಲ್‌ಭಾಯ್ ಶೇಕ್, ಅಬ್ದುಲ್ ರಜಾಕ್ ಮತ್ತು ಖಯಾಮುದ್ದೀನ್ ಎಂಬ ಶಂಕಿತರ ರೇಖಾಚಿತ್ರ ಬಿಡುಗಡೆ ಮಾಡಿದ್ದು, ಜುಲೈ 26ರ ಸ್ಫೋಟಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದಾರೆ ಎಂದು ಹೇಳಿದ್ದರೂ, ದೆಹಲಿ ಸ್ಫೋಟದಲ್ಲಿಯೂ ಇವರ ಸಂಪರ್ಕ ಇರಬಹುದು ಎಂಬ ಸುಳಿವನ್ನೂ ನೀಡಲಾಗಿದೆ.
ಅಹಮದಾಬಾದ್ ಮತ್ತು ದೆಹಲಿ ಸ್ಫೋಟಗಳು ಒಂದೇ ತೆರನಾಗಿವೆ. ಎರಡೂ ಘಟನೆಗಳ ಹಿಂದೆಯೂ ಒಂದೇ ಸಂಘಟನೆ ಇರುವ ಸಾಧ್ಯತೆ ಇದ್ದು ದೆಹಲಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದೇವೆ ಎಂದು ಅಪರಾಧ ವಿಭಾಗದ ಅಭಯ್ ಚುದಾಸಮಾ ಹೇಳಿರುವುದಾಗಿ ವರದಿ ತಿಳಿಸಿದೆ.
|