ಸಿಂಗೂರ್ ವಿವಾದಕ್ಕೆ ಸಂಬಂಧಿಸಿದಂತೆ ಪಶ್ಚಿಮಬಂಗಾಳ ಸರ್ಕಾರ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರ ಸಮ್ಮುಖದಲ್ಲಿ ಭೂಮಿ ಹಿಂತಿರುಗಿಸುವ ಒಪ್ಪಂದದ ಕರಾರಿಗೆ ಸಹಿ ಹಾಕುವುದನ್ನು ತಿರಸ್ಕರಿಸುವ ಮೂಲಕ ಬೇಡಿಕೆಯನ್ನು ಕಡೆಗಣಿಸಿರುವುದಾಗಿ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಮತ್ತೆ ಗುಡುಗಿದ್ದಾರೆ.
ಸಿಂಗೂರ್ ಟಾಟಾ ವಿವಾದಕ್ಕೆ ಸಂಬಂಧಿಸಿದಂತೆ ಪಶ್ಚಿಮಬಂಗಾಳ ಸರ್ಕಾರ ಮತ್ತು ತೃಣಮೂಲ ಕಾಂಗ್ರೆಸ್ ನೇತೃತ್ವದ ರೈತ ಸಂಘಟನೆಯಾದ ಕ್ರಿಷಿಜಾಮಿ ಜಿಬಾನ್ ರಕ್ಷಣ್ ಕಮಿಟಿ ನಡುವೆ ಸೆಪ್ಟೆಂಬರ್ 7ರಂದು ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು. ಆದರೆ ಸರ್ಕಾರ ತನ್ನ ಮಾತಿನಿಂದ ಹಿಂದೆ ಸರಿದಿದೆ ಅವರು ನ್ಯಾನೋ ಘಟಕದ ಮುಂಭಾಗದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಆ ನಿಟ್ಟಿನಲ್ಲಿ ಇಂದು ಸಿಂಗೂರ್‌ನತ್ತ ನಡೆಗೆ ಎಂಬ ಹೆಸರಿನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದು, ಮೂರು ದಿನಗಳ ಕಾಲ ತೃಣಮೂಲ ಕಾಂಗ್ರೆಸ್ ಕ್ಯಾಂಪ್ ಹಾಕಲಿದ್ದು, ರಾಜ್ಯಪಾಲರು ಪಶ್ಚಿಮಬಂಗಾಳಕ್ಕೆ ಹಿಂತಿರುಗುವವರೆಗೆ ಮುಂದುವರಿಯಲಿದ್ದು,ಬಳಿಕ ಪ್ರತಿಭಟನೆಯ ಕುರಿತು ವಿಮರ್ಶೆ ನಡೆಸುವುದಾಗಿ ಹೇಳಿದರು.
ಮಾತಿಗೆ ತಪ್ಪಿದ ಸರ್ಕಾರದ ವಿರುದ್ಧ ಹೊಸ ಪ್ರತಿಭಟನೆಯನ್ನು ಆರಂಭಿಸಿರುವುದಾಗಿ ಹೇಳಿದ ಬ್ಯಾನರ್ಜಿ, ನ್ಯಾನೋ ಯೋಜನೆಗಾಗಿ ವಶಪಡಿಸಿಕೊಂಡ ರೈತರ ಭೂಮಿಗೆ ಪರಿಹಾರ ಕೊಡಲು ಘನ ಸರ್ಕಾರ ಒಪ್ಪುವವರೆಗೆ ಇದು ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.
|